ಹರ್ ಘರ್ ತಿರಂಗಾ ಅಭಿಯಾನ ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿ ಜಾಗೃತಿಗೊಳಿಸಿದ್ದು, ಆ.15ರಂದು ಎಲ್ಲರೂ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ ಏಕತೆಗೆ ಕೈಜೋಡಿಸಬೇಕು ಎಂದು ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಕರೆ ನೀಡಿದರು.
ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ತಿರಂಗಾ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರಧ್ವಜ ಭಾರತೀಯರ ಸ್ವಾಭಿಮಾನ ಹಾಗೂ ತ್ಯಾಗ ಬಲಿದಾನದ ಪ್ರತೀಕ. ಪ್ರತಿಯೊಬ್ಬರೂ ಸ್ವಾತಂತ್ರೃ ಹೋರಾಟಗಾರರನ್ನು ಸ್ಮರಿಸಿ, ಗೌರವಿಸಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಂದು ಸಾವಿರ ಅಡಿ ಉದ್ದದ ತಿರಂಗಾ ಧ್ವಜ ಹಿಡಿದು ಸಿಟಿಇ, ಸಿಎಲ್‌ಇ ಸೊಸೈಟಿ ಹಾಗೂ ಇನ್ನಿತರ ಸಂಸ್ಥೆಗಳ ವಿದ್ಯಾರ್ಥಿಗಳು ತಿರಂಗಾ ರ‌್ಯಾಲಿಯಲ್ಲಿ ಭಾಗಿಯಾದರು. ಆರ್.ಡಿ.ಹೈಸ್ಕೂಲ್‌ನಿಂದ ಬಸ್ ನಿಲ್ದಾಣ, ಕೆಸಿ ರಸ್ತೆ, ಡಾ.ಪ್ರಭಾಕರ ಕೋರೆ ನಗರ ಮಾರ್ಗವಾಗಿ ಸಾಗಿ ಆರ್.ಡಿ.ಹೈಸ್ಕೂಲ್ ಮೈದಾನದಲ್ಲಿ ರ‌್ಯಾಲಿ ಮುಕ್ತಾಯಗೊಂಡಿತು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಮೇಶ ಕಾಳನ್ನವರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಜು ಹರಗಣ್ಣವರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಕುಂತಲಾ ದೋನವಾಡೆ, ಧನ್ಯಕುಮಾರ ಗುಂಡೆ, ಮಹೇಶ ಭಾತೆ, ದುಂಡಪ್ಪ ಬೆಂಡವಾಡೆ, ವಿಶ್ವನಾಥ ಕಾಮಗೌಡ, ಮಿಥುನ ದೇಶಪಾಂಡೆ, ಸಂಜೀವ ಪಾಟೀಲ, ಪವನಕುಮಾರ ಮಹಾಜನ, ಶ್ರೀಶೈಲ ಯಮಕನಮರಡಿ, ಸಂಗಮೇಶ ದುರದುಂಡಿ, ಅಪ್ಪಾಸಾಹೇಬ ಚೌಗಲಾ ಇತರರಿದ್ದರು.