ನೀರಾವರಿ ಭರವಸೆ ನೀಡಿದ ಸರ್ಕಾರ

ಹುಕ್ಕೇರಿಯ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ಎಂಡಿ ರಾಜೇಶ ಅಮ್ಮಣಗಿ ಮಾತನಾಡಿದರು. ಶಶಿಕಾಂತ ಗುರೂಜಿ, ಚಂದ್ರಶೇಖರ ಶಿವಾಚಾರ್ಯರು, ಚೂನಪ್ಪ ಪೂಜೇರಿ ಇತರರಿದ್ದರು.
ಹುಕ್ಕೇರಿಯ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ಎಂಡಿ ರಾಜೇಶ ಅಮ್ಮಣಗಿ ಮಾತನಾಡಿದರು. ಶಶಿಕಾಂತ ಗುರೂಜಿ, ಚಂದ್ರಶೇಖರ ಶಿವಾಚಾರ್ಯರು, ಚೂನಪ್ಪ ಪೂಜೇರಿ ಇತರರಿದ್ದರು.
Published on
ಹುಕ್ಕೇರಿ: ತಾಲೂಕಿನ ಮಲ್ಲಿಕಾರ್ಜುನ ಏತ ನೀರಾವರಿ ಯೋಜನೆ ಅವಶ್ಯವಿರುವ ನೀರಿನ ಹಂಚಿಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಮತ್ತು ತಾಂತ್ರಿಕ ಸಮಿತಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಕರ್ನಾಟಕ
ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಣಗಿ ತಿಳಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ರೈತ ಸಂಘಟನೆಯಿಂದ ಹಮ್ಮಿಕೊಂಡಿದ್ದ ಹುಕ್ಕೇರಿ ತಾಲೂಕು ಸಮಗ್ರ ನೀರಾವರಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ಈ ಯೋಜನೆ ನೀರಿನ ಕೊರತೆಯಿಂದ ವಿಳಂಬವಾಗಿತ್ತು. ಈ ಬಾರಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಈ ಭಾಗದ ಶಾಸಕ ನಿಖಿಲ ಕತ್ತಿ ಅವರ ಒತ್ತಾಸೆ ಮೇರೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಯೋಜನೆ ಯಶಸ್ವಿಗೊಳಿಸಲು ಸಕಾರತ್ಮಕ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದರು.
ಹುಕ್ಕೇರಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆ ಪರಿಶೀಲಿಸಿ ಆದಷ್ಟು ಬೇಗ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಬೇಡಿಕೆಯಂತೆ ಈ ಹೋರಾಟದ ಮುಖಂಡರನ್ನು ಜಲ ಸಂಪನ್ಮೂಲ ಸಚಿವರಿಗೆ ಭೇಟಿ ಮಾಡಿಸಿ, ಸಮಸ್ಯೆ ಚರ್ಚಿಸಲು ವೇದಿಕೆ ಕಲ್ಪಿಸುತ್ತೇನೆ ಎಂದರು.
ರೈತ ಸಂಘಟನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮತ್ತು ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ, ಈ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು ಸಂತಸ ತಂದಿದೆ. ಆದರೆ, ನುಡಿದಂತೆ ನಡೆದುಕೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಮಾತು ಮಾತಾಗದೇ ಕಾರ್ಯರೂಪಕ್ಕೆ ಬರಬೇಕು. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಅದನ್ನು ಈಡೇರಿಸುವಂತೆ ಕರ್ನಾಟಕ ನೀರಾವರಿ ನಿಗಮದ ಎಂಡಿ ಅವರನ್ನು ಕೋರಿದರು.
ನಾಲ್ಕು ದಿನಗಳಿಂದ ನಡೆದ ಪ್ರತಿಭಟನೆಯನ್ನು ರಾಜ್ಯ ರೈತ ಸಂಘದ ಮುಖಂಡರು ಹಿಂಪಡೆದರು. ಯಮಕನಮರಡಿ ಹುಣಸಿಕೊಳ್ಳಮಠದ ಸಿದ್ಧಬಸವ ಶ್ರೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತು ನೀರಾವರಿ ನಿಗಮದ ಅಧಿಕಾರಿಗಳು, ತಹಸೀಲ್ದಾರ್ ಬಲರಾಮ ಕಟ್ಟಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net