ಅಧ್ಯಾತ್ಮ, ವಿಜ್ಞಾನದ ಬೆಸುಗೆಯೇ ಶರಣ ಪರಿಕಲ್ಪನೆಯ ಬಯಲು

ಬೆಳಗಾವಿಯ ಮಹಾಂತ ಭವನದಲ್ಲಿ ಆಯೋಜಿಸಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ರತ್ನಕ್ಕ ಬೆಣಚಮರ್ಡಿ, ಬಸವರಾಜ ರೊಟ್ಟಿ, ಶಿವಬಸವ ದೇವರು, ಸಂಜಯ ಪಟ್ಟಣಶೆಟ್ಟಿ, ಪ್ರವೀಣಕುಮಾರ ಚಿಕಲಿ ಇತರರಿದ್ದರು.
ಬೆಳಗಾವಿಯ ಮಹಾಂತ ಭವನದಲ್ಲಿ ಆಯೋಜಿಸಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ರತ್ನಕ್ಕ ಬೆಣಚಮರ್ಡಿ, ಬಸವರಾಜ ರೊಟ್ಟಿ, ಶಿವಬಸವ ದೇವರು, ಸಂಜಯ ಪಟ್ಟಣಶೆಟ್ಟಿ, ಪ್ರವೀಣಕುಮಾರ ಚಿಕಲಿ ಇತರರಿದ್ದರು.
Published on
ಬೆಳಗಾವಿ: ಶರಣ ಸಾಹಿತ್ಯದಲ್ಲಿ ಬಯಲು ಎಂಬುದು ಕೇವಲ ಶೂನ್ಯವಲ್ಲ. ಅಧ್ಯಾತ್ಮ ಮತ್ತು ವಿಜ್ಞಾನ ಎರಡನ್ನೂ ಬೆಸೆಯುವ ಅದ್ಭುತ ಪರಿಕಲ್ಪನೆಯಾಗಿದ್ದು, ಶರಣರ ದೃಷ್ಟಿಯಲ್ಲಿ ಬಯಲು ಮತ್ತು ಅದರ ವೈಜ್ಞಾನಿಕ ಆಯಾಮಗಳ ಕುರಿತಾದ ವಿಶ್ಲೇಷಣೆ ಅಪರೂಪವಾಗಿದೆ ಎಂದು ರತ್ನಕ್ಕ(ಉಷಾ) ಚಂದ್ರಶೇಖರ ಬೆಣಚಮರ್ಡಿ ಹೇಳಿದರು.
ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ‘ಶರಣರ ವಚನಗಳಲ್ಲಿ ಬಯಲು ಪರಿಕಲ್ಪನೆ’ ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, ಬಯಲು ಶೂನ್ಯವಲ್ಲ. ಅದು ಪರಿಪೂರ್ಣತೆ. ಶರಣರ ಪ್ರಕಾರ ಯಾವುದೂ ಇಲ್ಲದ ಸ್ಥಿತಿಯಲ್ಲ, ಬದಲಿಗೆ ಎಲ್ಲವನ್ನೂ ತನ್ನೊಳಗೆ ಅಡಗಿಸಿಕೊಂಡಿರುವ ಮೂಲ ಚೇತನವಾಗಿದೆ. ಇದನ್ನು ಆಧುನಿಕ ವಿಜ್ಞಾನದ ಕ್ವಾಂಟಮ್ ವ್ಯಾಕ್ಯುಮ್ ಅಥವಾ ಸಿಂಗುಲ್ಯಾರಿಟಿಗೆ ಹೋಲಿಸಬಹುದು ಎಂದರು.
ವಿಜ್ಞಾನದ ಪ್ರಕಾರ ಶೂನ್ಯದಿಂದಲೇ ಸೃಷ್ಟಿ ಆರಂಭವಾಯಿತು. ಶರಣರು ಅಂದೇ ಬಯಲಿನಿಂದಲೇ ಸಕಲವೂ ಸೃಜಿಸಲ್ಪಟ್ಟಿತು ಎಂದು ಪ್ರತಿಪಾದಿಸಿದರು. 12ನೇ ಶತಮಾನದ ಅನುಭವ ಮಂಟಪವು ಇಂದಿನ ಸಂಶೋಧನಾ ಕೇಂದ್ರದಂತೆ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ಯಾವುದನ್ನೂ ಕುರುಡಾಗಿ ನಂಬುತ್ತಿರಲಿಲ್ಲ. ಅನುಭವವಿಲ್ಲದ ಮಾತು ಅಧ್ವಾನ ಎಂಬುದು ಶರಣರ ನಂಬಿಕೆ. ವಿಜ್ಞಾನವು ಹೇಗೆ ಪ್ರಯೋಗ ಮತ್ತು ದತ್ತಾಂಶಗಳನ್ನು ಕೇಳುತ್ತದೆಯೋ, ಹಾಗೆಯೇ ಶರಣರು ವೈಯಕ್ತಿಕ ಅನುಭವಕ್ಕೆ ಒತ್ತು ನೀಡಿದರು. ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸುವ ಮೂಲಕ ವೈಜ್ಞಾನಿಕ ವಿಚಾರಧಾರೆಗೆ ನಾಂದಿ ಹಾಡಿದರು ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಸವರಾಜ ರೊಟ್ಟಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಚನಗಳ ಕುರಿತು, ಶರಣ ಸಂಸ್ಕೃತಿಯ ಕುರಿತು ಇಲ್ಲ ಸಲ್ಲದ ಉಹಾಪೋಹಗಳನ್ನು ಸಮಾಜದಲ್ಲಿ ಹರಿಬಿಡುತ್ತಿರುವುದು ಸರಿಯಲ್ಲ. ಬಸವಾಭಿಮಾನಿಗಳ ಮನ ನೋಯಿಸುವ ಕಾರ್ಯವನ್ನು ತಕ್ಷಣದಿಂದ ನಿಲ್ಲಿಸದಿದ್ದರೆ ಲಿಂಗಾಯತ ಮಹಾಸಭಾ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರವೀಣಕುಮಾರ ಚಿಕಲಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿದರು. ಪಿಎಚ್‌ಡಿ ಪಡೆದಿರುವ ಎಸ್‌ಜಿಬಿಐಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರೊ.ಮಂಜುನಾಥ ಶರಣಪ್ಪನವರನ್ನು ಸತ್ಕರಿಸಲಾಯಿತು.
ಶಿವಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಮಹಾಂತೇಶ ನಗರ ರಹವಾಸಿಗಳ ಸಂಘದ ಕಾರ್ಯದರ್ಶಿ ಸಂಜಯ ಪಟ್ಟಣಶೆಟ್ಟಿ, ನಿರ್ದೇಶಕ ಅರುಣ ನೇರಲಿ, ಅರವಿಂದ ಪರುಶೆಟ್ಟಿ, ಎಸ್.ಜಿ.ಸಿದ್ನಾಳ, ಚಂದ್ರಪ್ಪ ಬೂದಿಹಾಳ, ಮುರಿಗೆಪ್ಪ ಬಾಳಿ, ಅಶೋಕ ಮಳಗಲಿ, ಮೋಹನ ಗುಂಡ್ಲೂರ, ಸುಜಾತಾ ಮತ್ತಿಕಟ್ಟಿ, ಅನುಷಾ ಬಸೆಟ್ಟಿ, ಸುಲೋಚನಾ ವಸ್ತ್ರದ, ಕಾವೇರಿ ಕಿಲಾರಿ, ಶೋಭಾ ಶಿವಳ್ಳಿ, ಮಹಾನಂದಾ ಪರುಶೆಟ್ಟಿ, ಯರಗಟ್ಟಿಯ ಅಶೋಕ ಹಾದಿಮನಿ, ಈರಣ್ಣ ಚಿನಗುಡಿ, ಎಫ್.ಆರ್.ಪಾಟೀಲ ಇತರರಿದ್ದರು.
ಶ್ರೀದೇವಿ ನರಗುಂದ ನಿರೂಪಿಸಿದರು. ಡಾ.ಗೀತಾ ದೇಯನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ ಚಿನಿವಾರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net