ಆಸ್ತಿ ದಾಖಲೆ ಡಿಜಿಟಲೀಕರಣಕ್ಕೆ ಮುಂದಾದ ಪಾಲಿಕೆ!

 ಮಹಾನಗರ ಪಾಲಿಕೆ
ಮಹಾನಗರ ಪಾಲಿಕೆ
Published on
ಬೆಳಗಾವಿ: ಆಡಳಿತದಲ್ಲಿ ಪಾರದರ್ಶಕತೆ, ಖಾಸಗಿ, ಸರ್ಕಾರಿ ಆಸ್ತಿಗಳ ದಾಖಲೆ ಸಂರಕ್ಷಣೆ ಹಾಗೂ ಅಕ್ರಮ ಕಡಿವಾಣಕ್ಕೆ ಹಾಕುವ ನಿಟ್ಟಿನಲ್ಲಿ 50 ವರ್ಷದ ಹಳೆ ದಾಖಲೆ ಡಿಜಿಟಲೀಕರಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ!
ಹೌದು. ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ 58 ವಾರ್ಡ್ ವ್ಯಾಪ್ತಿಯ ಪ್ರದೇಶದಲ್ಲಿ ಅಂದಾಜು 1.52 ಲಕ್ಷ ವಸತಿ, ವಾಣಿಜ್ಯ ಮಳಿಗೆ, ಖಾಲಿ ನಿವೇಶನಗಳು ಹಾಗೂ ಸರ್ಕಾರಿ ಆಸ್ತಿಗಳಿವೆ. ಆದರೆ, 1980 ರಿಂದ 2020ರ ನಡುವಿನ ಅವಧಿಯಲ್ಲಿ ಆಸ್ತಿ ಮೂಲ ದಾಖಲೆಗಳು ಸಿಗುತ್ತಿಲ್ಲ. ಕೆಲ ಆಸ್ತಿ ಮೂಲ ದಾಖಲೆ ನಾಪತ್ತೆಯಾಗಿದ್ದರೆ, ಇನ್ನೂ ಕೆಲ ಆಸ್ತಿ ಮೂಲ ಮಾಲೀಕರು ಹೆಸರಿನ ದಾಖಲೆಗಳು ಬೇರೆ ಹೆಸರಿನಲ್ಲಿ. ಹೀಗಾಗಿ ಇದಕ್ಕೆಲ್ಲಾ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಳೆ ದಾಖಲೆಗಳ ಪರಿಶೀಲಿಸಿ ಡಿಜಿಟಲೀಕರಣ ಮಾಡಲು ಕ್ರಮ ವಹಿಸಿದೆ.ಅಲ್ಲದೆ ಇದಕ್ಕಾಗಿ 1 ರಿಂದ 2 ಕೋಟಿ ರೂ. ಅನುದಾನ ಮೀಸಲಿಡಲು ಕ್ರಮ ವಹಿಸಿದೆ.
ನಗರ ನಾಗರಿಕರಿಗೆ ತ್ವರಿತ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರವು 2021ರಲ್ಲಿಯತೇ ಇ-ಆಫೀಸ್ ಯೋಜನೆ ಅನುಷ್ಠಾನಗೊಳಿಸಿ ಕೋಟ್ಯಂತರ ರೂ. ಅನುದಾನ ಮೀಸಲಿಟ್ಟಿದೆ. ಆದರೆ, ವಾಸ್ತವದಲ್ಲಿ ಸಿಬ್ಬಂದಿ ಕೊರತೆ, ಅನುದಾನ ಅಭಾವ ಹಾಗೂ ಹೆಚ್ಚುವರಿ ಕೆಲಸಗಳಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಡಳಿತ ವಿಭಾಗವು ನಿಗದಿತ ಸಮಯದಲ್ಲಿ ಇ-ಗರ್ವನೇನ್ಸ್ ಅನುಷ್ಠಾನಗೊಳಿಸಲಿಲ್ಲ. ಪರಿಣಾಮ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳ ದಾಖಲೆ ನಿರ್ವಹಣೆ ಇಲ್ಲದೆ ಕಂಡವರ ಪಾಲಾಗುತ್ತಿವೆ. ಹಲವು ದಶಕಗಳ ಹಳೆಯ ಕಡತಗಳ ಸ್ಕಾೃನಿಂಗ್ ಮತ್ತು ಡಿಜಿಟಲೀಕರಣ ಅರ್ಧಕ್ಕೆ ಮೊಟಕುಗೊಂಡಿದೆ. ಅಲ್ಲದೆ, ಇಲಾಖೆಯ ಪೋರ್ಟಲ್‌ನಲ್ಲಿ ಸಾರ್ವಜನಿಕರಿಗೆ ದಾಖಲುಗಳು ಲಭ್ಯವಾಗುತ್ತಿಲ್ಲ. ಜನರು ತೆರಿಗೆ ಕಟ್ಟುವುದು ಸೇರಿ ಪ್ರತಿಯೊಂದು ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 1950 ರಿಂದ 2004ರವರೆಗಿನ ದಾಖಲೆಗಳ ಪತ್ತೆ ಹಚ್ಚುವ ಕಾರ್ಯ ವರ್ಷದಿಂದ ನಡೆಯುತ್ತಿದೆ. ಆದರೆ, ದಾಖಲೆಗಳು ಮಾತ್ರ ಸಿಗುತ್ತಿಲ್ಲ. ದಾಖಲೆಗಳು ಪತ್ತೆಯಾಗದಿರುವ ಆಯಾ ಆಸ್ತಿಗಳ ಮಾಲೀಕರು ಸಮ್ಮುಖದಲ್ಲಿಯೇ ದಾಖಲೆ ಪರಿಶೀಲಿಸಿ ಸ್ಕಾೃನಿಂಗ್ ಮಾಡಲಾಗುವದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ನಗರದ ಮಹಾನಗರ ಪಾಲಿಕೆ ಹಳೆ ಕಟ್ಟಡದಲ್ಲಿ ಸಂಗ್ರಹಿಟ್ಟಿರುವ ಆಸ್ತಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ, ಹಳೆ ಬೆಳಗಾವಿ ಪ್ರದೇಶದ ಆಸ್ತಿಗಳ ದಾಖಲೆಗಳು ಸಿಗುತ್ತಿಲ್ಲ. ಕೆಲ ಆಸ್ತಿ ದಾಖಲೆ ಸುಟ್ಟು ಹೋಗಿವೆ. ಹೀಗಾಗಿ ಹೊಸ ದಾಖಲೆ ಸೃಷ್ಟಿ ಮಾಡುವುದು ಸಮಸ್ಯೆಯಾಗಿದೆ. ಇವುಗಳನ್ನು ಪತ್ತೆ ಹೆಚ್ಚುವ ಕಾರ್ಯಕ್ರಮ ವರ್ಷಗಳಿಂದ ನಡೆಯುತ್ತಿದೆ. ಮತ್ತೊಂದೆಡೆ ಆಸ್ತಿ ತೆರಿಗೆ ಸಂಗ್ರಹದ ಮೇಲೆ ಶೇ.40ರಷ್ಟು ಪರಿಣಾಮ ಬೀರಿದೆ ಎಂದು ಪಾಲಿಕೆಯ ಹಾಲಿ, ಮಾಜಿ ಸದಸ್ಯರು ದೂರಿದ್ದಾರೆ.
.........................
ಬಾಕ್ಸ್
ಸಾರ್ವಜನಿಕ ಆಸ್ತಿ ಪರಭಾರೆ!
ಪಾಲಿಕೆ ವ್ಯಾಪ್ತಿಯ ವಸತಿ ಪ್ರದೇಶಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಆಸ್ತಿ ಒತ್ತುವರಿ, ಖಾಸಗಿ ವ್ಯಕ್ತಿಗಳಿಗೆ ಪರಭಾವೆ ಮಾಡಲಾಗಿದೆ. ಕೆಲ ಆಸ್ತಿಗೆ ಸಂಬಂಧಿಸಿದ ರಜಿಸ್ಟ್ರರ್, ಠರಾವು ಪುಸ್ತಕಗಳು ಸಿಗುತ್ತಿಲ್ಲ.ದಾಖಲೆಗಳ ತಿದ್ದುಪಡಿ ಮಾಡಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿದೆ. ಬಹುತೇಕ ಕಡೆ ನಾಲಾಗಳ ಒತ್ತುವರಿಯಾಗಿವೆ. ಇವುಗಳ ತೆರವು ಮೂಲ ನಕ್ಷೆ ಸಿಗುತ್ತಿಲ್ಲ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
......................
ಬಾಕ್ಸ್
* ಒಟ್ಟು ಆಸ್ತಿಗಳು - 1.48 ಲಕ್ಷ
* ಮೂಲ ದಾಖಲೆ ನಾಮಪತ್ತೆ ಆಸ್ತಿ - ಶೇ.12
*ಆಸ್ತಿ ದಾಖಲೆಗಳ ಸ್ಕಾೃನಿಂಗ್ - ಶೇ.30
............
ಕೋಟ್ಸ್
ಪಾಲಿಕೆ ವ್ಯಾಪ್ತಿಯ ಎಲ್ಲ ಹಳೆ ಮತ್ತು ಹೊಸ ದಾಖಲೆಗಳ ಪರಿಶೀಲನೆ ಮತ್ತು ಸಂರಕ್ಷಣೆಗೆ ಕ್ರಮ ವಹಿಸಲಾಗಿದೆ. ಆಸ್ತಿ ದಾಖಲೆಗಳ ಸ್ಕಾೃನಿಂಗ್ ಮಾಡಲು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.ಪಾಲಿಕೆ ಹಳೆ ಕಟ್ಟಡದಲ್ಲಿರುವ ಆಸ್ತಿ ದಾಖಲೆ ಪತ್ತೆ ಹಚ್ಚಲು ಸಿಬ್ಬಂದಿ ಸೂಚನೆ ನೀಡಲಾಗಿದೆ. ಕೆಲ ಆಸ್ತಿ ದಾಖಲೆ ಇಲ್ಲದಿರುವ ಕುರಿತು ದೂರು ಬಂದಿವೆ.
-ಕಾರ್ತಿಕ್.ಎಂ., ಪಾಲಿಕೆ ಆಯುಕ್ತ
...............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net