ಬಿಎಸ್‌ವೈ ಕೊಡುಗೆಗೆ ಸಮುದಾಯ ಋಣಿ - ಡಾ.ಪ್ರಭಾಕರ ಕೋರೆ

ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಮಹಾಸಭೆಯಿಂದ ನಿರ್ಮಿಸಿದ ವಿದ್ಯಾರ್ಥಿನಿಯರ ಉಚಿತ ವಸತಿನಿಲಯ ವನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಡಾ.ಪ್ರಭಾಕರ ಕೋರೆ, ಬಿ.ವೈ.ವಿಜಯೇಂದ್ರ, ಶಂಕರ ಬಿದರಿ, ಶರಣ ಪ್ರಕಾಶ ಪಾಟೀಲ, ಎಂ.ಬಿ.ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ, ಡಾ.ಬಿ.ಜಿ. ಪಾಟೀಲ ಮಹೇಶ ಬೆಲ್ಲದ ಇತರರಿದ್ದರು.
ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಮಹಾಸಭೆಯಿಂದ ನಿರ್ಮಿಸಿದ ವಿದ್ಯಾರ್ಥಿನಿಯರ ಉಚಿತ ವಸತಿನಿಲಯ ವನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಡಾ.ಪ್ರಭಾಕರ ಕೋರೆ, ಬಿ.ವೈ.ವಿಜಯೇಂದ್ರ, ಶಂಕರ ಬಿದರಿ, ಶರಣ ಪ್ರಕಾಶ ಪಾಟೀಲ, ಎಂ.ಬಿ.ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ, ಡಾ.ಬಿ.ಜಿ. ಪಾಟೀಲ ಮಹೇಶ ಬೆಲ್ಲದ ಇತರರಿದ್ದರು.
Published on
ಬೆಳಗಾವಿ: ಅತ್ಯಂತ ಬೆಲೆಬಾಳುವ ಜಾಗದಲ್ಲಿ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿನಿಯರಿಗೆ ಉಚಿತ ವಸತಿನಿಲಯ ನಿರ್ಮಿಸುವಲ್ಲಿ ಬಿ.ಎಸ್. ಯಡಿಯೂರಪ್ಪ ಕೊಡುಗೆ ಅಪಾರ. ಅಂದು 2 ಕೋಟಿ ರೂ. ಬೆಲೆ ನಿಗದಿಯಾಗಿದ್ದ ಜಾಗವನ್ನು ಸಮುದಾಯಕ್ಕಾಗಿ ಕೇವಲ 24 ಲಕ್ಷ ರೂ.ಗೆ ಒದಗಿಸಿದರು. ಹೀಗಾಗಿ ಸಮುದಾಯ ಅವರಿಗೆ ಋಣಿಯಾಗಿರಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೊರೆ ಹೇಳಿದರು.
ಆಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ ಹಾಗೂ ವೀರಶೈವ ಲಿಂಗಾಯತ ಮಹಿಳಾ ವಸತಿಗೃಹ ಕ್ಷೇಮಾಭಿವೃದ್ಧಿ ಸಂಘದಿಂದ ಇಲ್ಲಿನ ಸುಭಾಸ ನಗರದಲ್ಲಿ ನಿರ್ಮಿಸಿರುವ ಲಿಂಗೈಕ್ಯ ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ-ಕಬ್ಬೂರ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿನಿಲಯ ಉದ್ಘಾಟನೆ ಮತ್ತು ನಾಮಕರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮುದಾಯದ ಮಠಗಳು ಮೊದಲಿನಿಂದಲೂ ಜಾತ್ಯತೀತವಾಗಿ ವಸತಿನಿಲಯ ನಡೆಸುತ್ತ ಬಂದಿವೆ. ಎಷ್ಟೋ ಜನ ಈ ಮಠಗಳಲ್ಲಿ ಉಚಿತವಾಗಿ ಕಲಿತು ಬೆಳೆದಿದ್ದಾರೆ ಎಂದರು.
ಬೆಳಗಾವಿ ವೀರಶೈವ ಲಿಂಗಾಯತರ ಗಂಡುಮೆಟ್ಟಿನ ನಾಡು. ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ ಹೋರಾಟಕ್ಕೆ ಹೆಸರಾಗಿದ್ದ್ದಾರೆ. ಬಸವಣ್ಣನವರ ಕಾಲದಲ್ಲೇ ಮಹಿಳೆಯರಿಗೆ ಸಮಾನ ಹಕ್ಕು ಕೊಡಲಾಗಿದೆ. ಆದರೆ ಅದನ್ನು ಮುಂದುವರಿಸಲು ಆಗಿಲ್ಲ. ವಸತಿನಿಲಯ ಸೌಲಭ್ಯ ಇಲ್ಲದ್ದಕ್ಕೆ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಆಗುತ್ತಿಲ್ಲ. ಇಂತಹ ಓರ್ವ ವಿದ್ಯಾರ್ಥಿನಿ ನನ್ನ ಬಳಿ ನೋವು ತೋಡಿಕೊಂಡಿದ್ದಳು. ಅವತ್ತೇ ಉಚಿತ ವಸತಿನಿಲಯ ಮಾಡುವ ಸಂಕಲ್ಪ ಮಾಡಿದ್ದೆ. ಅದು ಇವತ್ತು ಸಾಕಾರಗೊಂಡಿದೆ. ಇದಕ್ಕಾಗಿ ಮಹೇಶ ಬಸಲಿಂಗಪ್ಪ ಬೆಲ್ಲದ 1 ಕೋಟಿ ರೂ. ದಾನ ಮಾಡಿದ್ದಾರೆ. ಹೀಗೆ ಅನೇಕರು ಕೈ ಜೋಡಿಸಿದ್ದಾರೆ. ಈ ದಾನ ಪರಂಪರೆ ನಮ್ಮಲ್ಲಿ ಶಿರಸಂಗಿ ಲಿಂಗರಾಜರ ಕಾಲದಿಂದಲೂ ಬಂದಿದೆ ಎಂದರು.
ಮಹೇಶ ಬೆಲ್ಲದ ಮತ್ತು ಅನಿತಾ ಬೆಲ್ಲದ ದಂಪತಿ, ಇತರ ದಾನಿಗಳನ್ನು ಸನ್ಮಾನಿಸಲಾಯಿತು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಎಂ.ಬಿ.ಪಾಟಿಲ, ಶರಣ ಪ್ರಕಾಶ ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್, ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಾಜಿ ಸಂಸದ ರಮೇಶ ಕತ್ತಿ, ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ, ಶಾಸಕರಾದ ರಾಜು ಕಾಗೆ, ಮಹಾಂತೇಶ ಕೌಜಲಗಿ, ಬಿ.ಆರ್.ಪಾಟೀಲ ಯಾವಗಲ್, ಎಂ.ವೈ.ಪಾಟೀಲ, ಅಮರೇಗೌಡ ಬಯ್ಯಪುರ, ಲತಾ ಮಲ್ಲಿಕಾರ್ಜುನ, ಹನುಮಂತ ನಿರಾಣಿ, ಶೈಲೇಂದ್ರ ಬೆಲ್ದಾಳೆ, ಶಶಿಲ್ ನಮೋಸಿ, ಅಲ್ಲಮಪ್ರಭು ಪಾಟೀಲ, ಗಣೇಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಡಾ.ಎಚ್.ಬಿ.ರಾಜಶೇಖರ, ಆಶಾ ಪ್ರಭಾಕರ ಕೋರೆ, ಎಂ.ಬಿ.ಝಿರಲಿ, ಜಗದೀಶ ಮೆಟಗುಡ್ಡ, ಡಾ.ಪ್ರೀತಿ ಕೋರೆ ಇತರರಿದ್ದರು. ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ವಂದಿಸಿದರು.

ನಾನೂ ಕೈ ಜೋಡಿಸುವೆ

ನನ್ನ ಪವರ್ ಆಫ್ ಅಟಾರ್ನಿ ಡಾ. ಕೋರೆ ಅವರ ಬಳಿಯಿದೆ. ಅದಕ್ಕೆ ಯಾವುದೇ ಷರತ್ತಿಲ್ಲ. ಅವರು ಹೇಳಿದ್ದನ್ನು ನೂರಕ್ಕೆ ನೂರು ಮಾಡುವೆ ಎಂದು ಸಚಿವ ಎಂ.ಬಿ.ಪಾಟೀಲ ವಾಗ್ದಾನ ಮಾಡಿದರು. ಇದಕ್ಕೆ ಸ್ಪಂದಿಸಿದ ಡಾ.ಕೋರೆ ‘ನೂತನ ವಸತಿನಿಲಯಕ್ಕೆ 3.5 ಕೋಟಿ ರೂ. ಖರ್ಚು ಮಾಡಿದ್ದೇವೆ. ಇನ್ನೊಂದು ಮಹಡಿ ಮಾಡಬೇಕಿದೆ. ಅದನ್ನು ಸಚಿವ ಎಂ.ಬಿ.ಪಾಟೀಲರೇ ಮಾಡಿ ಕೊಡಬೇಕು. ಎಂ.ಬಿ.ಪಾಟೀಲರು ಶಿರಸಂಗಿಯವರ ವಶಂಸ್ಥರಿದ್ದಾರೆ. ದಾನ ಪರಂಪರೆ ಅವರ ರಕ್ತದಲ್ಲೇ ಬಂದಿದೆ. ಇದೊಂದು ದಾನ ಆಗಲಿ’ ಎಂದರು.

50 ಲಕ್ಷ ರೂ. ಸಂಗ್ರಹಿಸುವೆ

ಗದಗ, ಹಾವೇರಿ, ಧಾರವಾಡದಲ್ಲಿ ಮಹಾಸಭೆಯಿಂದ ಇದೇ ರೀತಿಯ ವಸತಿನಿಲಯ ಮಾಡಲು ಮುಂದಾದರೆ ನಾನೂ 50 ಲಕ್ಷ ರೂ. ಸಂಗ್ರಹಿಸಿ ಕೊಡುವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net