ಎಐ ಯುಗ ಸಾಹಿತ್ಯಕ್ಕೆ ಸವಾಲು

ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ್ದ ಸಾಹಿತ್ಯ ಉತ್ಸವವನ್ನು ಕೆಎಲ್‌ಇ ಸಂಸ್ಥೆ ನಿರ್ದೇಶಕರ ಮಹಾಂತೇಶ ಕವಟಗಿಮಠ ಉದ್ಘಾಟಿಸಿದರು. ಡಾ.ಸಿ.ಬಾಲಕೃಷ್ಣ, ಡಾ.ಅಶೋಕ ಚೌಹಾನ,  ಮಹೇಶ ವಿಜಾಪುರ, ಡಾ.ಜಿ.ಎನ್.ಶೀಲಿ, ಡಾ.ಸಿ.ರಾಮಾರಾವ ಇತರರಿದ್ದರು.
ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ್ದ ಸಾಹಿತ್ಯ ಉತ್ಸವವನ್ನು ಕೆಎಲ್‌ಇ ಸಂಸ್ಥೆ ನಿರ್ದೇಶಕರ ಮಹಾಂತೇಶ ಕವಟಗಿಮಠ ಉದ್ಘಾಟಿಸಿದರು. ಡಾ.ಸಿ.ಬಾಲಕೃಷ್ಣ, ಡಾ.ಅಶೋಕ ಚೌಹಾನ, ಮಹೇಶ ವಿಜಾಪುರ, ಡಾ.ಜಿ.ಎನ್.ಶೀಲಿ, ಡಾ.ಸಿ.ರಾಮಾರಾವ ಇತರರಿದ್ದರು.
Published on
ಬೆಳಗಾವಿ: ಕೃತಕ ಬುದ್ಧಿಮತ್ತೆ ಸಾಹಿತ್ಯ ಸೃಷ್ಟಿಸುವ ಸಾಧನವಾಗಿದ್ದರೂ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ ಮತ್ತು ಸೃಜನಶೀಲ ಸಾಹಿತ್ಯವೇ ಮೂಲವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಭಾಷಾ ವಿಭಾಗಗಳು ಸೋಮವಾರ ಆಯೋಜಿಸಿದ್ದ ‘ಭವಿಷ್ಯದ ಪ್ರತಿಧ್ವನಿಗಳು-ಕೃತಕ ಬುದ್ಧಿಮತ್ತೆ ಯುಗದಲ್ಲಿನ ಸಾಹಿತ್ಯ’ಎಂಬ ವಿಷಯವನ್ನಾಧರಿತ ದ್ವಿದಿನ ರಾಷ್ಟ್ರೀಯ ಮಟ್ಟದ ಸಾಹಿತ್ಯ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಾಹಿತ್ಯ ಹಲವು ಸವಾಲು ಎದುರಿಸುತ್ತಿದೆ. ಮಾತೃಭಾಷೆ ವ್ಯಕ್ತಿಯ ವ್ಯಕ್ತಿತ್ವ ರೂಪಿಸಲು ಮಹತ್ವದ ಪಾತ್ರ ವಹಿಸುತ್ತದೆ. ಮಾತೃಭಾಷೆಯಲ್ಲಿ ಪ್ರಭುತ್ವ ಹೊಂದಿದವರು ವಿಶ್ವವನ್ನೇ ಜಯಿಸಬಲ್ಲರು. ಕೃತಕ ಬುದ್ಧಿಮತ್ತೆ ಯುಗದಲ್ಲಿ ವಿದ್ಯಾರ್ಥಿಗಳು ಭಾಷಾ ಪ್ರಭುತ್ವ ಪಡೆದು ಯಶಸ್ವಿಯಾಗಬೇಕು. ಕೃತಕ ಬುದ್ಧಿಮತ್ತೆಯನ್ನು ಮಾನವನ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ ಒಂದು ಸಾಧನ ಮಾತ್ರ. ಅದು ಮನುಷ್ಯನ ಆಂತರಿಕ ಭಾವನೆಗಳನ್ನು ತೋರ್ಪಡಿಸಲು ಸೃಜನಶೀಲ ಭಾಷೆಯನ್ನು ಬಳಸಿಕೊಳ್ಳಬೇಕು. ಭಾರತದಲ್ಲಿ ಅತಿದೊಡ್ಡ ಮಾನವ ಸಂಪನ್ಮೂಲವಿದ್ದು, ಸಂಪನ್ಮೂಲದ ಕಲ್ಯಾಣಕ್ಕಾಗಿ ಕೃತಕ ಬುದ್ಧಿಮತ್ತೆ ಬಳಕೆಯಾಗಬೇಕು. ಆ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸಬೇಕು ಎಂದರು.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿ.ಬಾಲಕೃಷ್ಣ ಮಾತನಾಡಿ, ಕೃತಕ ಬುದ್ಧಿಮತ್ತೆ ಮಾನವನ ಕಲ್ಪನಾ ಶಕ್ತಿ ನಾಶಗೊಳಿಸುವ ದೊಡ್ಡ ಸಾಧನವಾಗಿದೆ. ಇದನ್ನು ಸರಿಯಾಗಿ ಉಪಯೋಗಿಸಬೇಕು. ಮಾನವನ ಅಭಿವೃದ್ಧಿಗೆ ತಕ್ಕಂತೆ ಬಳಕೆಯಾಗಬೇಕು. ಕೃತಕ ಬುದ್ಧಿಮತ್ತೆ ಪದಗಳನ್ನು ಸೃಷ್ಟಿಸಿ, ಭಾವನೆಗಳನ್ನು ವಿಶ್ಲೇಷಿಸಬಹುದು ಹೊರತು ಭಾವನೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹೀಗಾಗಿ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಕೃತಕ ಬುದ್ಧಿಮತ್ತೆ ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಶಿವಾಜಿ ವಿಶ್ವವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕ ಡಾ.ಅಶೋಕ ಚೌಹಾನ, ವಿಜಯವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಿದರು.
ಪ್ರಾಚಾರ್ಯ ಡಾ.ಹನುಮಂತ ಮೇಲಿನಮನಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಾಧ್ಯಾಪಕ ಡಾ.ಜಿ.ಎನ್.ಶೀಲಿ, ಡಾ.ಸಿ.ರಾಮಾ ರಾವ ಇತರರಿದ್ದರು. ಕಾರ್ಯಕ್ರಮದಲ್ಲಿ 25 ಮಹಾವಿದ್ಯಾಲಯಗಳಿಂದ 450 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರೋಹಿಣಿ ಹಣಬರಟ್ಟಿ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಎಂ.ಚನ್ನಪ್ಪಗೋಳ ಸ್ವಾಗತಿಸಿದರು. ಡಾ.ನಂದನ ಕಟಾಂಬಳೆ ಪರಿಚಯಿಸಿದರು. ಡಾ.ಶಶಿಕಾಂತ ಕೊಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಶ್ರದ್ಧಾ ಜೋಶಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net