14 ಹಳ್ಳಿಗಳಿಗೆ ಟ್ಯಾಂಕರ್ ನೀರೇ ಗತಿ!

ಹುಕ್ಕೇರಿ ತಾಲೂಕಿನ ಯರನಾಳದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಹುಕ್ಕೇರಿ ತಾಲೂಕಿನ ಯರನಾಳದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.
Published on

ಪ್ರಮುಖ ಮುಖ್ಯಾಂಶಗಳು

  • 52 ಗ್ರಾಮಗಳಲ್ಲಿ ಜೀವಜಲಕ್ಕೆ ತತ್ವಾರ
  • ಬೆಳಗಾವಿ ನಗರಕ್ಕೂ ಜಲಸಂಕಷ್ಟ
ಬೆಳಗಾವಿ: ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 14 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.
ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಕಾರಣ ಹಿಡಕಲ್ಲ, ನವೀಲುತೀರ್ಥ, ರಕ್ಕಸಕೊಪ್ಪ ಜಲಾಶಯ ಹಾಗೂ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಅಂತರ್ಜಲ ಮಟ್ಟ ಕೂಡ 800ರಿಂದ 1,000 ಅಡಿವರೆಗೆ ಕುಸಿದಿದೆ. ಹೀಗಾಗಿ, ಬೆಳಗಾವಿ, ಖಾನಾಪುರ, ಚಿಕ್ಕೋಡಿ, ಅಥಣಿ, ರಾಮದುರ್ಗ ತಾಲೂಕು ವ್ಯಾಪ್ತಿಯ 14 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ.
ಜೂ.30ರ ಒಳಗಾಗಿ ಮಳೆ ಸುರಿಯದಿದ್ದರೆ ಬೆಳಗಾವಿ ಮಹಾನಗರ ಸೇರಿದಂತೆ ವಿವಿಧ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ 45 ವಾರ್ಡ್‌ಗಳು ಹಾಗೂ 45 ಗ್ರಾಪಂ ವ್ಯಾಪ್ತಿಯ 52 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಕಾರಿ ಅಭಿಯಂತ ತಿಳಿಸಿದ್ದಾರೆ.
ಬೆಳಗಾವಿ ಮಹಾನಗರಕ್ಕೆ ನೀರು ಪೂರೈಸುವ ಹಿಡಕಲ್ಲ ಜಲಾಶಯದಲ್ಲಿ ಕುಡಿಯುವ ನೀರಿಗಾಗಿ ಕಳೆದ ವರ್ಷ ಜೂನ್ ಮಾಸಾಂತ್ಯದಲ್ಲಿ 17.54 ಟಿಎಂಸಿ ನೀರು ಲಭ್ಯವಿತ್ತು. ಈ ಬಾರಿ ಕೇವಲ 5.24 ಟಿಎಂಸಿ ನೀರು ಲಭ್ಯವಿದೆ. ರಕ್ಕಸಕೊಪ್ಪ ಜಲಾಶಯ ಖಾಲಿಯಾಗಿದ್ದು, 20 ದಿನಗಳವರೆಗೆ ಸಾಕಾಗುವಷ್ಟು ಮಾತ್ರ ನೀರು ಲಭ್ಯವಿದೆ. ಹೀಗಾಗಿ, ಬೆಳಗಾವಿ ಮಹಾನಗರಕ್ಕೂ ನೀರಿನ ಕೊರತೆ ಎದುರಾಗಿದ್ದು, ವಾರಕ್ಕೊಮ್ಮೆ ಕೇವಲ ಒಂದು ಗಂಟೆ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಕೆಲ ವಾರ್ಡ್‌ಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಜುಲೈನಲ್ಲಿ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ಎಲ್ ಆ್ಯಂಡ್ ಟಿ ಅಧಿಕಾರಿಗಳು ವಿನಂತಿಸಿದ್ದಾರೆ.
ಸಮಸ್ಯೆ ಇರುವ ಊರುಗಳು
ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಅಥಣಿ-2, ಬೈಲಹೊಂಗಲ-4, ಚಿಕ್ಕೋಡಿ-4, ಖಾನಾಪುರ-8, ಬೆಳಗಾವಿ-13, ರಾಯಬಾಗ-13, ರಾಮದುರ್ಗ-3 ಹಾಗೂ ಮೂಡಲಗಿ-6, ಹುಕ್ಕೇರಿ-4 ಗ್ರಾಮಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 65ಕ್ಕೂ ಅಧಿಕ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ.
"

ಸದ್ಯ ಜಿಲ್ಲೆಯಲ್ಲಿ 14 ಗ್ರಾಮ ಗಳಲ್ಲಿನ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸದ್ಯ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಂದಾಜು 62 ಹಳ್ಳಿಗಳಲ್ಲಿ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನ-ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪರ್ಯಾಯ ವ್ಯವಸ್ಥೆ ಮೂಲಕ ಜಿಲ್ಲೆಯ್ಯದ್ಯಂತ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

— ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net