ಗುತ್ತಿಗೆ ಅವಧಿ ಮುಗಿದ ಆಸ್ತಿ ವಶಪಡಿಸಿಕೊಳ್ಳಿ

ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೇಯರ್ ಪ್ರೀತಿ ಕಾಮಕರ ಮಾತನಾಡಿದರು. ಹನುಮಂತ ಕೊಂಗಾಲಿ, ಡಾ.ಸಿದ್ದು ಹುಲ್ಲೋಳಿ ಇತರರಿದ್ದರು.
ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೇಯರ್ ಪ್ರೀತಿ ಕಾಮಕರ ಮಾತನಾಡಿದರು. ಹನುಮಂತ ಕೊಂಗಾಲಿ, ಡಾ.ಸಿದ್ದು ಹುಲ್ಲೋಳಿ ಇತರರಿದ್ದರು.
Published on
ಬೆಳಗಾವಿ: ಮಹಾನಗರ ಪಾಲಿಕೆ ಒಡೆತನದ ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಬಾಡಿಗೆದಾರರು ಆಸ್ತಿ ಉಪಯೋಗಿಸಿ ಪಾಲಿಕೆಗೆ ನಷ್ಟ ಉಂಟುಮಾಡುತ್ತಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೇಯರ್ ಪ್ರೀತಿ ಕಾಮಕರ ಸೂಚಿಸಿದರು.
ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದ ವಿವಿಧ ಭಾಗಗಳಲ್ಲಿ ಪಾಲಿಕೆ ನೂರಾರು ಆಸ್ತಿಗಳು ಸಮರ್ಪಕ ಬಳಕೆಯಾಗುತ್ತಿಲ್ಲ. ಕೆಲ ಭಾಗದಲ್ಲಿ ಆಸ್ತಿಗಳ ದುರ್ಬಳಕೆ ಆಗುತ್ತಿದ್ದು, ಕಂದಾಯ ವಿಭಾಗದ ಅಧಿಕಾರಿಗಳು ಅಂಥ ಆಸ್ತಿ ಗುರುತಿಸಿ ವಶಪಡಿಸಿಕೊಳ್ಳಬೇಕು ಎಂದರು.
ಈಗಾಗಲೇ ಗುತ್ತಿಗೆ ಅವಧಿ ಮುಗಿದಿರುವ ಆಸ್ತಿ ವಶಪಡಿಸಿಕೊಂಡು ಬಾಡಿಗೆ ದರ ನಿಗದಿಪಡಿಸಿ ಹೊಸದಾಗಿ ಗುತ್ತಿಗೆ ನೀಡುವಂತೆ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ, ವರ್ಷಗಳಿಂದ ಗುತ್ತಿಗೆ ಮುಗಿದಿರುವ ಆಸ್ತಿಗಳ ವಶಪಡಿಸಿಕೊಳ್ಳಲು ಅಧಿಕಾರಿಗಳು ಕ್ರಮವಹಿಸಿಲ್ಲ. ಹೀಗಾಗಿ, ಪಾಲಿಕೆ ಆಸ್ತಿಗಳು ದುರ್ಬಳಕೆ ಆಗುತ್ತಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೂಡಲೇ ಗುತ್ತಿಗೆ ಅವಧಿ ಮುಗಿದ ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಿ ಮುಗಿದ ಅವಧಿ ಬಾಡಿಗೆ ಮತ್ತು ದಂಡ ವಸೂಲಿ ಮಾಡಬೇಕು. ಕೆಲ ಆಸ್ತಿ ಎರಡು ವರ್ಷಗಳಿಂದ ಬಾಡಿಗೆ ವಸೂಲಿ ಆಗಿಲ್ಲ. ಅಂತಹ ಆಸ್ತಿಗಳನ್ನು ಕೂಡಲೇ ಪಾಲಿಕೆಗೆ ಮರಳಿ ಪಡೆದು ಪ್ರಸ್ತುತ ಬಾಡಿಗೆ ದರವನ್ನು ಮರು ನಿಗದಿಪಡಿಸಿ ಅರ್ಹ ಬಾಡಿಗೆದಾರಿಗೆ ನೀಡಬೇಕು. ಈ ಕುರಿತು ನಿಯಮಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಉಪಮೇಯರ್ ಹನುಮಂತ ಕೊಂಗಾಲಿ ಮಾತನಾಡಿ, ಅವಧಿ ಮುಗಿದಿದ್ದರೂ ಬಾಡಿಗೆದಾರರು ಆಸ್ತಿ ಉಪಯೋಗಿಸುತ್ತಿರುವುದರಿಂದ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ಕುರಿತು ಪಾಲಿಕೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಹೂಗಾರ, ಪಾಲಿಕೆ ಸದಸ್ಯರಾದ ರವಿ ಧೋತ್ರೆ, ಆನಂದ ಚೌಹಾಣ, ರಾಜಶೇಖರ ಡೋಣಿ, ನಿತಿನ್ ಜಾಧವ, ಶ್ರೀಶೈಲ ಕಾಂಬಳೆ, ಕಂದಾಯ ವಿಭಾಗದ ಉಪ ಆಯುಕ್ತ ಡಾ.ಸಿದ್ದು ಹುಲ್ಲೋಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net