ಮೋಜಣಿಗಾಗಿ ಭೂಮಾಪಕರು, ರೈತರು ಹೈರಾಣ!

 ಭೂಮಾಪಕರು (ಸರ್ವೆದಾರರು)
ಭೂಮಾಪಕರು (ಸರ್ವೆದಾರರು)
Published on

ಜಮೀನು ಅಳತೆಗಾಗಿ ಅರ್ಜಿ ಸಲ್ಲಿಸಿದ ರೈತರು, ಜನಸಾಮಾನ್ಯರು ಸರ್ವೆದಾರರಿಗೆ ಕಾಯುವ ಸ್ಥಿತಿ ಒಂದೆಡೆಯಾದರೆ, ಮತ್ತೊಂದೆರಡೆ ಭೂಮಾಪಕರು (ಸರ್ವೆದಾರರು) ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲು ಹೆಣಗಾಡುವಂತಾಗಿದೆ!

ಹೌದು. ರಾಜ್ಯ ಸರ್ಕಾರವು ನಿಗದಿತ ಅವಧಿಯಲ್ಲಿಯೇ ರೈತರಿಗೆ, ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಿ ಅಲೆದಾಟ ತಪ್ಪಿಸುವ ಉದ್ದೇಶದಿಂದ ಭೂಮಿ ಅಳತೆ ಮತ್ತು ಭೂ ದಾಖಲೆಗಳ ನಿರ್ವಹಣೆಗಾಗಿ ಮೋಜಣಿ ಡಿಜಿಟಲ್ ತಂತ್ರಾಂಶ ಜಾರಿಗೊಳಿಸಿದೆ. ಆದರೆ, ಅದೇ ಮೋಜಣಿ ತಂತ್ರಾಂಶದಲ್ಲಿ ಸರ್ವರ್ ದೋಷ, ತಾಲೂಕು ನವೀಕರಣ ವಿಳಂಬ, ಸಿಬ್ಬಂದಿ ಕೊರತೆ ಹಾಗೂ ಹೆಚ್ಚುತ್ತಿರುವ ಅರ್ಜಿಗಳ ಸಂಖ್ಯೆ ಇತರೆ ಕಾರಣಗಳಿಂದಾಗಿ ಮೋಜನೆ ಅರ್ಜಿ ಸಲ್ಲಿಕೆ, ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ನಗರ, ಗ್ರಾಮೀಣ ಭಾಗದಲ್ಲಿ ಹೊಸ ಬಡಾವಣೆ ನಿರ್ಮಾಣ, ವಸತಿ ಯೋಜನೆ, ಕೈಗಾರಿಕೆ ಸ್ಥಾಪನೆ, ಕೃಷಿ ಭೂಮಿ ಮಾರಾಟ, ಖರೀದಿ, ಜಮೀನು ಹದ್ದುಬಸ್ತು, ಸೀಮೆ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸರ್ವೆಗಾಗಿ ನಿತ್ಯ ಹೊಸದಾಗಿ 150 ರಿಂದ 200ರವರೆಗೆ ಅರ್ಜಿ ಸಲ್ಲಿಕೆಯಾಗುತ್ತಿವೆ. ಈ ನಡುವೆ ಸರ್ಕಾರಿ ಯೋಜನೆಗಳಿಗೆ ಭೂ ಸ್ವಾಧೀನಕ್ಕಾಗಿ ನ್ಯಾಯಾಲಯ, ವಿವಿಧ ಇಲಾಖೆಗಳಿಂದ 10 ರಿಂದ 20 ಅರ್ಜಿಗಳು ಸಲ್ಲಿಕೆಯಾಗುತ್ತಿವೆ.
ಭೂಮಿ ಅಳತೆಗೆ ಅರ್ಜಿ ಸಲ್ಲಿಸಿದರೂ ಸರ್ವೆಯರ್ ಸಮಯಕ್ಕೆ ಬಾರದಿರುವುದು, ಹೊಸ ತಾಲೂಕು ಕೇಂದ್ರಗಳಲ್ಲಿ ಗಡಿ ಮತ್ತು ಸರ್ವೆ ನಂಬರ್‌ಗಳು ತಂತ್ರಾಂಶದಲ್ಲಿ ಅಪ್‌ಡೇಟ್ ಆಗದಿರುವುದು ಹಾಗೂ ವರದಿಗಳು ಸಕಾಲಕ್ಕೆ ಸಿಗದೇ ಇರುವುದು ಹೀಗೆ ವಿವಿಧ ಕಾರಣಗಳಿಂದಾಗಿ ಕಂದಾಯ ಇಲಾಖೆಯಲ್ಲಿ 4,035 ಹಾಗೂ ಸರ್ವೆ ಇಲಾಖೆಯಲ್ಲಿ 31,201 ಸೇರಿ 35,236 ಅರ್ಜಿಗಳು ವಿಲೇವಾರಿಗಾಗಿ ಕಾಯುತ್ತಿವೆ.
ಭೂಮಾಪಕರ ನಾಲ್ಕು ತಿಂಗಳ ಮುಷ್ಕರದಿಂದಾಗಿ ಭೂಮಾಪನ, ಸರ್ವೆ, ಪಹಣಿ ತಿದ್ದುಪಡಿ, ಹದ್ದುಬಸ್ತು, ಖಾತೆ ಬದಲಾವಣೆ ಸೇರಿ ಜಮೀನು ಸಂಬಂಧಿಸಿದ ಲಕ್ಷಕ್ಕೂ ಅಧಿಕ ಅರ್ಜಿಗಳು ವಿಲೇವಾರಿ ಆಗದೆ ಬಾಕಿ ಉಳಿದುಕೊಂಡಿವೆ. ಮತ್ತೊಂದೆಡೆ ಭೂಮಿಗೆ ಸಂಬಂಧಿಸಿದ ಎಲ್ಲ ವ್ಯವಹಾರ ಕೂಡ ಆಮೆಗತಿಯಲ್ಲಿ ಸಾಗುತ್ತಿವೆ. ಅರ್ಜಿಗಳ ನಿಗದಿತ ಸಮಯದಲ್ಲಿ ವಿಲೇವಾರಿಗೆ ಆಗುತ್ತಿಲ್ಲ.ಅರ್ಜಿದಾರರು ಭೂಮಿ ಸರ್ವೆಗಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.
..............
ಬಾಕ್ಸ್
ತಿಂಗಳ ಗುರಿ ಮುಟ್ಟುವುದು ಕಷ್ಟ
ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಭೂಮಾಪಕರ-92 ಹಾಗೂ ಖಾಸಗಿ ಪರವಾನಗಿ ಸರ್ವೆದಾರರು 283 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ಭೂಮಾಪಕನಿಗೆ ತಿಂಗಳಿಗೆ 23 ಅರ್ಜಿ ವಿಲೇವಾರಿ ಮಾಡುವ ಗುರಿ ನೀಡಲಾಗಿದೆ. ಆದರೆ, ಸಿಬ್ಬಂದಿ ಕೊರತೆ, ಸರ್ವರ್ ಸಮಸ್ಯೆ, ಅರ್ಜಿದಾರರು ಸಕಲಾಕ್ಕೆ ಸ್ಪಂದಿಸದಿರುವುದು, ಭೂ ಮಾಲೀಕರು ನಡುವೆ ಗಲಾಟೆ ಇತರೆ ಕಾರಣಗಳಿಂದಾಗಿ 2-3 ದಿನಕ್ಕೆ ಒಂದು ಅರ್ಜಿ ವಿಲೇವಾರಿ ಆಗುತ್ತಿರುವುದರಿಂದ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಭೂಮಾಪಕರು.
.........................
ಬಾಕ್ಸ್
ಮೋಜಣಿ ಪ್ರಗತಿ ವಿವರ
ವಿಭಾಗ ಅರ್ಜಿಗಳು
ಆರಂಭಿಕ ಬಾಕಿ 33,924
ಸ್ವೀಕೃತ 4214
ವಿಲೇವಾರಿ 2,902
ಬಾಕಿ 35,236
...........
ಕೋಟ್ಸ್
ಈ ಹಿಂದೆ ಪರವಾನಗಿ ಸರ್ವೆರ್‌ಗಳು ನಾಲ್ಕು ತಿಂಗಳು ಮುಷ್ಕರ ಕೈಗೊಂಡಿದ್ದರಿಂದ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗಿದ್ದು ನಿಜ. ಈ ಸಮಸ್ಯೆ ಸರಿದೂಗಿಸಲು ಪ್ರತಿಯೊಬ್ಬ ಸರ್ವೆಗೆ ತಿಂಗಳಿಗೆ 30 ಅರ್ಜಿ ವಿಲೇವಾರಿ ಗುರಿ ನೀಡಿ ಜುಲೈ ತಿಂಗಳಿನಲ್ಲಿ 11,946 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಅರ್ಜಿದಾರರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
-ವಿಜಯ ಕುಮಾರ, ಉಪ ನಿರ್ದೇಶಕ, ಭೂ ದಾಖಲೆಗಳ ಸಂರಕ್ಷಣೆ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net