ವಿವಿಧ ಗ್ರಾಮಗಳಲ್ಲಿ ಕಬ್ಬಿಗೆ ಬೆಂಕಿ

sugarcane burn
sugarcane burn
Published on
ಹಿರೇಬಾಗೇವಾಡಿ: ಸಮೀಪದ ಬಸಾಪುರ ಗ್ರಾಮದಲ್ಲಿ ಬುಧವಾರ ವಿದ್ಯುತ್ ತಂತಿ ಸ್ಪರ್ಶದಿಂದ ಹದಿಮೂರು ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ. ಗ್ರಾಮದ ಸಿದ್ದಪ್ಪ ಬಸಪ್ಪ ಬಾಗೇವಾಡಿ 7 ಎಕರೆ, ಚನ್ನಪ್ಪ ಸಿದ್ರಾಮಪ್ಪ ಬಾಗೇವಾಡಿ 3 ಎಕರೆ, ಬಾಬು ಸಿದ್ರಾಮಪ್ಪ ಬಾಗೇವಾಡಿ 3 ಎಕರೆ ಸೇರಿ ಒಟ್ಟು 13 ಎಕರೆ ಕಬ್ಬು ಸುಟ್ಟು ನಾಶವಾಗಿದೆ. ಗ್ರಾಮದ ಹೊಲಗಳಲ್ಲಿನ ಜೋತು ಬಿದ್ದ ತಂತಿಗಳನ್ನು ಸರಿಪಡಿಸುವಂತೆ ಹೆಸ್ಕಾಂಗೆ ಪಂಚಾಯಿತಿಯಿಂದ ಮನವಿ ಸಲ್ಲಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗಾಪಂ ಅಧ್ಯಕ್ಷ ನಾಗಪ್ಪ ಬಾಗೇವಾಡಿ ಆರೋಪಿಸಿದ್ದಾರೆ.
ಭೆಂಡಿಗೇರಿ ಮತ್ತು ಬಡಸದಲ್ಲೂ ಕಬ್ಬಿಗೆ ಬೆಂಕಿ: ಇದಲ್ಲದೆ, ಸಮೀಪದ ಭೆಂಡಿಗೇರಿ ಮತ್ತು ಬಡಸ ಕೆ.ಎಚ್. ಗ್ರಾಮಗಳಲ್ಲೂ ಬುಧವಾರ ವಿದ್ಯುತ್ ತಂತಿ ಸ್ಪರ್ಶದಿಂದ ಎಂಟೂವರೆ ಎಕರೆ ಕಬ್ಬಿನ ಬೆಳೆ ಸುಟ್ಟು ನಷ್ಟವಾಗಿದೆ. ಬಡಸ ಕೆ.ಎಚ್. ಗ್ರಾಮದ ದುಂಡಯ್ಯ ಬಸಲಿಂಗಯ್ಯ ಚಿಕ್ಕಮಠ 2 ಎಕರೆ 44 ಗುಂಟೆ ಮತ್ತು ಭೆಂಡಿಗೇರಿ ಗ್ರಾಮದ ಮಂಜುಳಾ ಹುಲಮನಿ 3 ಎಕರೆ ಹಾಗೂ ಹನಮಂತಪ್ಪ ಹಳ್ಳೂರಗೆ ಸೇರಿದ 3 ಎಕರೆ
ಕಬ್ಬು ನಾಶವಾಗಿದೆ. ಈ ಕುರಿತು ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ನಂದೇಶ್ವರದಲ್ಲೂ ಬೆಂಕಿ: ವಿದ್ಯುತ್ ಅವಘಡದಿಂದ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿ ಶಿವಕುಮಾರ ಪಾಟೀಲ ಹಾಗೂ ವಿಜಯಕುಮಾರ ಪಾಟೀಲ ಅವರ 8 ಎಕರೆ ಕಬ್ಬು ಸುಟ್ಟ ಘಟನೆ ಸಮೀಪದ ಸತ್ತಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿ ಅಪಾರ ಪ್ರಮಾಣದ ಹಾನಿ ತಪ್ಪಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net