ರಾಮದುರ್ಗದ ವಿದ್ಯಾ ಪ್ರಸಾರಕ ಸಮಿತಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿದರು. ಮಲ್ಲಣ್ಣ ಯಾದವಾಡ, ಶಾಹೀನ್ ಅಖ್ತರ್ ಇತರರಿದ್ದರು.
ರಾಮದುರ್ಗ:ವಿದ್ಯಾರ್ಥಿ ದಿಸೆಯಲ್ಲಿಯೇ ಸಹಕಾರ ರಂಗದ ಕುರಿತು ಜ್ಞಾನ ನೀಡುವ ನಿಟ್ಟಿನಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಶಾಸಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಪಟ್ಟಣ ಹೇಳಿದರು.
ವಿದ್ಯಾ ಪ್ರಸಾರಕ ಸಮಿತಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಕೇಂದ್ರ ಸಹಕಾರ ಸಚಿವಾಲಯ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಡಿಸಿಸಿ ಬ್ಯಾಂಕ್ ಹಾಗೂ ಸ್ಥಳೀಯ ಸಹಕಾರ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಸರ್ಕಾರಿ ನೌಕರಿಗಾಗಿ ಕಾಯಬಾರದು. ಇರುವ ಕೌಶಲ ಬಳಸಿಕೊಂಡು, ಸ್ವಯಂ ಉದ್ಯೋಗದ ಮೂಲಕ ಉದ್ಯಮಿಗಳಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಮಾತನಾಡಿ, ಸಹಕಾರ ಕ್ಷೇತ್ರ ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಹಾಸುಹೊಕ್ಕಾಗಿ ಬೆಳೆಯುತ್ತಿದೆ. ಸಹಕಾರ ಜನರಿಗೆ ಸೇವೆ ನೀಡುವ ಕ್ಷೇತ್ರವಾಗಿದೆ. ಶಿಕ್ಷಣ ಕ್ಷೇತ್ರ ಹಾಗೂ ಸಹಕಾರ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಎಸ್.ಎಸ್.ಸುಲ್ತಾನಪುರ ಮಾತನಾಡಿ, ವಿದ್ಯಾ ಪ್ರಸಾರಕ ಸಮಿತಿಯಲ್ಲಿ ವಿದ್ಯಾರ್ಥಿಗಳಿಗೆ ಸರ್ವ ಕ್ಷೇತ್ರದ ಜ್ಞಾನ ನೀಡುವ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ಸಹಕಾರ ಅಭಿವೃದ್ಧಿ ಅಧಿಕಾರಿ ಗಿರೀಶ ಯಾವಗಲ್ಲ, ಬಿಡಿಸಿಸಿ ಬ್ಯಾಂಕ್ ತಾಲೂಕು ನಿರ್ವಹಣಾಧಿಕಾರಿ ಬಿ.ಬಿ.ಹಾಲೋಳ್ಳಿ, ಮಹಾವಿದ್ಯಾಲಯದ ಸಂಯೋಜಕ ಎಸ್.ಲೇಪಾಕ್ಷಿ, ಜಿಮಖಾನಾ ಉಪಾಧ್ಯಕ್ಷೆ ಶಿವಲೀಲಾ ಗೋಲನ್ನವರ ಇತರರಿದ್ದರು.
ಪ್ರಾಚಾರ್ಯ ಡಾ.ಆರ್.ಎಲ್.ಕುಳ್ಳೂರ ಸ್ವಾಗತಿಸಿದರು. ಡಾ.ವಿ.ಬಿ.ವಗ್ಗರ ಮತ್ತು ಭಾರತಿ ಪಮ್ಮಾರ ನಿರೂಪಿಸಿದರು.