ಸತ್ತರೆ ಮಣ್ಣು ಮಾಡಲು ಪರದಾಟ!

 ಕಿತ್ತೂರು ನಗರದ ಹೊರ ವಲಯದಲ್ಲಿ ಕೆರೆಯ ಬಳಿ ರಸ್ತೆ ಬದಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ಸಾರ್ವಜನಿಕರು.
ಕಿತ್ತೂರು ನಗರದ ಹೊರ ವಲಯದಲ್ಲಿ ಕೆರೆಯ ಬಳಿ ರಸ್ತೆ ಬದಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ಸಾರ್ವಜನಿಕರು.
Published on
ಬೆಳಗಾವಿ : ಇಲ್ಲಿರುವವರಲ್ಲಿ ಹಲವರು ತಮ್ಮ ಸ್ವಂತ ಜಮೀನಿನಲ್ಲಿ ಶವ ಹೂತರೆ, ಇನ್ನೂ ಕೆಲವರಿಗೆ ಭೂಮಿಯೇ ಇಲ್ಲ.ಸ್ಮಶಾನ ಭೂಮಿಗಳಿದ್ದರೂ ಮೂಲಸೌಕರ್ಯಗಳು ಇಲ್ಲವೇ ಇಲ್ಲ. ಈ ಕಾರಣಕ್ಕಾಗಿ ರಸ್ತೆ, ಕಾಲುವೆ, ನದಿ, ಹಳ್ಳದ ಪಕ್ಕವೇ ಹೂಳಬೇಕಾದ ಪರಿಸ್ಥಿತಿ ಇದೆ!
ಇದು ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಮೂಡಲಗಿ, ಗೋಕಾಕ, ಸವದತ್ತಿ, ರಾಮದುರ್ಗ, ಕಿತ್ತೂರು,ಕಾಗವಾಡ ಸೇರಿ ವಿವಿಧ ತಾಲೂಕಿನ ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲದೆ ಜನರು ಎದುರಿಸುತ್ತಿರುವ ಗೋಳು.
ನಿಧನರಾದವರಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸುವುದು ಎಲ್ಲ ಧರ್ಮಗಳಲ್ಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಜಿಲ್ಲೆಯಲ್ಲಿ ಸಾಕಷ್ಟು ಸ್ಮಶಾನ ಭೂಮಿಗಳಿದ್ದರೂ ಮೂಲಸೌಕರ್ಯಗಳ ಕೊರತೆ ಇದೆ. ಜಾಗ ವಿವಾದ, ಒತ್ತುವರಿ ದೂರುಗಳಿವೆ. ಜಾತಿ, ಧರ್ಮಗಳ ಜನರಿಗೆ ಪ್ರತ್ಯೇಕ ಭೂಮಿ ಇದ್ದರೂ ಅವು ಸಮರ್ಪಕವಾಗಿಲ್ಲ. ಕೆಲವು ಜಾತಿಗಳ ಜನರು ರುದ್ರಭೂಮಿ ಜಾಗಕ್ಕಾಗಿ ಇಂದಿಗೂ ಹೋರಾಟ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ 1245 ಜನವಸತಿಯ ಗ್ರಾಮಗಳ ಪೈಕಿ 1227 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇದ್ದರೂ ಸೌಲಭ್ಯ ಕಲ್ಪಿಸಿರುವುದು ಕೇವಲ 550 ರಿಂದ 650 ಗ್ರಾಮಗಳಲ್ಲಿ ಮಾತ್ರ. ಶೇ.65ರಷ್ಟು ಗ್ರಾಮಗಳಲ್ಲಿ ಶವ ಸಂಸ್ಕಾರ ಮಾಡಲು ಸರ್ಕಾರಿ ಜಮೀನು ನೀಡಲಾಗಿದೆ. ಕೆಲವು ಕಡೆ ದೇಸಾಯಿ, ಜಮಿನ್ದಾರರು, ಗೌಡರರು ಸ್ಮಶಾನಕ್ಕಾಗಿ ಭೂಮಿ ಬಿಟ್ಟುಕೊಟ್ಟಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ಸ್ಮಶಾನಕ್ಕೆ ಪ್ರತ್ಯೇಕ ಭೂಮಿ ಇಲ್ಲದ ಕಾರಣ ನೂರಾರು ಗ್ರಾಮಗಳಲ್ಲಿ ಕೃಷಿ ಭೂಮಿ, ರಸ್ತೆ , ನದಿ ಪಕ್ಕದಲ್ಲಿಯ ಶವಸಂಸ್ಕಾರ ನಡೆಸಲಾಗುತ್ತಿದೆ. ಪ್ರವಾಹ ಸಂದರ್ಭದಲ್ಲಿ ನದಿ ದಡ ಗ್ರಾಮಗಳಲ್ಲಿ ಯಾರಾದರೂ ಮೃತಪಟ್ಟರೆ ಸುರಕ್ಷಿತ ಸ್ಥಳಕ್ಕಾಗಿ ಅಲೆದಾಡುವ ಸ್ಥಿತಿ ಇದೆ.
ಮೂಡಲಗಿ,ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ಸೇರಿ ಸುತ್ತಮುತ್ತಲಿನ ನದಿದಡದ 45ಕ್ಕೂ ಅಧಿಕ ಜನವಸತಿ ಪ್ರದೇಶಗಳಲ್ಲಿನ ಜನರು ಈಗಲೂ ಶವ ಸಂಸ್ಕಾರಕ್ಕಾಗಿ ಸ್ವಂತ ಜಮೀನು ಇಲ್ಲವೇ ರಸ್ತೆ ಬದಿಯಲ್ಲಿ ಅಂತ್ಯ ಸಂಸ್ಕಾರ ನೇರವೇರಿಸುತ್ತಿದ್ದಾರೆ. ಅಲ್ಲದೆ, ರುದ್ರಭೂಮಿ ಅಭವಾದಿಂದಾಗಿ ಶವಸಂಸ್ಕಾರಕ್ಕಾಗಿ 10 ರಿಂದ 15 ಸಾವಿರ ರೂ. ವರೆಗೆ ವೆಚ್ಚ ಮಾಡಲಾಗುತ್ತಿದೆ ಚಿಕ್ಕೋಡಿ ತಾಲೂಕಿನ ಬೆಳಕೊಡ, ನಿಪ್ಪಾಣಿ ತಾಲೂಕಿನ ಕಾರಗದ, ಕಿತ್ತೂರು ತಾಲೂಕಿನ ಮಲ್ಲಾಪುರ ಬಿ.ಕೆ., ಮೂಡಲಗಿ ತಾಲೂಕಿನ ಅವರಾದಿ,ಢವಳೇಶ್ವರ, ಬಿಸನಕೊಪ್ಪ ಗ್ರಾಮಸ್ಥರು ದೂರಿದ್ದಾರೆ.
ಜನಸಂಖ್ಯೆ ಹೆಚ್ಚಿದಂತೆ ವಸತಿ ಪ್ರದೇಶಗಳು ವಿಸ್ತರಿಸುತ್ತಿವೆ. ಆದರೆ ರುದ್ರಭೂಮಿಗಳ ವಿಸ್ತರಣೆ ಮಾತ್ರ ಆಗಿಲ್ಲ. ಇದ್ದ ರುದ್ರಭೂಮಿಗಳು ಜಾಗದ ಕೊರತೆ, ಮೂಲಸೌಕರ್ಯಗಳ ಅಭಾವ, ಒತ್ತುವರಿ, ನಿರ್ವಹಣೆಯ ಸಮಸ್ಯೆಯಿಂದ ನರಳುತ್ತಿವೆ. ಹೊಸದಾಗಿ ರುದ್ರಭೂಮಿಗಳ ನಿರ್ಮಾಣಕ್ಕೆ ಭೂಮಿ ಸಿಗದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.
...................................
ಬಾಕ್ಸ್
ರುದ್ರಭೂಮಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು
* ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಗರೀಕರಣದಿಂದಾಗಿ ರುದ್ರಭೂಮಿಗಳಿಗೆ ಮೀಸಲಾದ ಜಾಗ ಕಡಿಮೆ.
*ಅನೇಕ ರುದ್ರಭೂಮಿಗಳಲ್ಲಿ ಕುಡಿಯುವ ನೀರು, ವಿದ್ಯುತ್ ದೀಪಗಳು, ರಸ್ತೆ ಸಂಪರ್ಕ ಮತ್ತು ಶವಗಳನ್ನು ಇಡಲು ಅಥವಾ ಸುಡಲು ಸೂಕ್ತದಾದ ಶೆಡ್‌ಗಳು ಕೊರತೆ.
*ರುದ್ರಭೂಮಿ ಜಾಗವನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವುದು ಅಥವಾ ಇತರ ಉದ್ದೇಶಗಳಿಗೆ ಬಳಸಿಕೊಡಿರುವುದು.
*ಕಸದ ಸಮಸ್ಯೆ, ಮುಳ್ಳುಕಂಟಿಗಳು ಬೆಳದಿರುವುದು ಮತ್ತು ನಿರ್ವಹಣೆಯ ಕೊರತೆಯಿಂದಾಗಿ ರುದ್ರಭೂಮಿಗಳ ದುಸ್ಥಿತಿಯಲ್ಲಿವೆ.
* ಜಾತಿ, ಧರ್ಮ ಆಧಾರಿತ ರುದ್ರಭೂಮಿಗಳು ಇರುವುದು, ಕೆಲವು ಸಮುದಾಗಳಿಗೆ ಪ್ರತ್ಯೇಕ ಜಾಗ ಸಿಗದಿರುವುದು ಸಾಮಾಜಿಕ ಅಸಮಾನತೆಗೆ ಕಾರಣ ಎನ್ನಲಾಗಿದೆ.
....................
ಬಾಕ್ಸ್
ಪುನಶ್ಚೇನಗೊಳಿಸುವ ಕೆಲಸ ಆಗುತ್ತಿಲ್ಲ
ಸದ್ಯ ಜಿಲ್ಲೆಯ್ಯದ್ಯಂತ 250ಕ್ಕೂ ಅಧಿಕ 50 ಸಾವಿರ ವರ್ಷಕ್ಕಿಂತ ಹಳೆಯ ರುದ್ರಭೂಮಿಗಳಿವೆ. ಆದರೆ, ನಿರ್ವಹಣೆ ಕೊರತೆ, ಆಡಳಿತ ನಿರ್ಲಕ್ಷೃದಿಂದಾಗಿ ಅನೇಕ ರುದ್ರಭೂಮಿಗಳನ್ನು ಪುನಶ್ಚೇತನಗೊಳಿಸಿ ಅಭಿವೃದ್ಧಿ ಪಡಿಸುವ ಕೆಲಸ ಆರಂಭಗೊಂಡಿಲ್ಲ.ವಿದ್ಯುತ ಚಿತಾರಾಗಳನ್ನು ಅಳವಡಿಸುವ ಕೆಲಸ ಕೂಡ ನಡೆದಿಲ್ಲ. ಹೀಗಾಗಿ ಹಳೆ ರುದ್ರಭೂಮಿಗಳಲ್ಲಿ ಶವ ಸಂಸ್ಕಾರ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ.
..........
ಬಾಕ್ಸ್
ರುದ್ರಭೂಮಿಯಲ್ಲಿ ಸಮಾಧಿಯೇ ಸಮಸ್ಯೆ
ನಗರ, ಗ್ರಾಮೀಣ ಭಾಗದಲ್ಲಿರುವ ರುದ್ರಭೂಮಿಯಲ್ಲಿ ಬಹುತೇಕ ಸಮಾಧಿಗಳೇ ಆವರಿಸಿರುವ ಕಾರಣ ಹೊಸದಾಗಿ ಸಮಾದಿ ನಿರ್ಮಾಣ ಮಾಡುವುದರಿಲಿ ಅಂತ್ಯ ಸಂಸ್ಕಾರಗಳಿಗೂ ಸ್ಥಳವಕಾಶದ ಸಮಸ್ಯೆಯಾಗಿದೆ. ಹೀಗಾಗಿ ಸಮಾಧಿಗಳೇ ಸಮಸ್ಯೆಯಾಗಿದ್ದು, ತೆರವುಗೊಳಿಸದಂತೆ ಪರಿಸ್ಥಿತಿ ಇದೆ.ಪರ್ಯಾಯ ಸ್ಥಳ ಸಿಗುತ್ತಿಲ್ಲ. ಅಂತ್ಯಕ್ರಿಯೆ ನೆರವೇರಿಸುವ ಪ್ರಕ್ರಿಯೆ ರುದ್ರಭೂಮಿ ಪ್ರದೇಶದ ಒಂದು ಭಾಗಗಷ್ಟೇ ಸೀಮಿತವಾಗಿದೆ.ಬಹುತೇಕ ಭಾಗ ಸಮಾಧಿಗಳಿಂದಲೇ ತುಂಬಿ ತುಳುಕುತ್ತಿವೆ
..............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net