ಯರಡಾಲದಲ್ಲಿ ಕುಡಿವ ನೀರಿಗೆ ಪರದಾಟ

ಯರಡಾಲ ಗ್ರಾಮದಲ್ಲಿ ನಾಗರಿಕರು ಕುಡಿಯುವ ನೀರಿಗಾಗಿ ಅಲೆಯುತ್ತಿರುವ ದೃಶ್ಯ.
ಯರಡಾಲ ಗ್ರಾಮದಲ್ಲಿ ನಾಗರಿಕರು ಕುಡಿಯುವ ನೀರಿಗಾಗಿ ಅಲೆಯುತ್ತಿರುವ ದೃಶ್ಯ.
Published on
ಬೈಲಹೊಂಗಲ: ತಾಲೂಕಿನ ಯರಡಾಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ನಿತ್ಯ ಪರದಾಡುತ್ತಿದ್ದು, ಬೈಲವಾಡ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಗರಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಚನ್ನಮ್ಮನ ಕಿತ್ತೂರು ಮತಕ್ಷೇತ್ರಕ್ಕೆ ಒಳಪಡುವ ಗ್ರಾಮದಲ್ಲಿ ಜೆಜೆಎಂ ಯೋಜನೆ ವಿಫಲವಾಗಿದ್ದು, ಮನೆ ಮನೆಗೆ ನೀರು ತಲುಪಿಲ್ಲ. ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಬೋರವೆಲ್‌ಗಳಿದ್ದು ಸಮರ್ಪಕ ನೀರು ಸರಬರಾಜು ಆಗದೇ ಎರಡು ಕಿ.ಮೀ. ಕ್ರಮಿಸಿ ಜನರು ನೀರು ಸಂಗ್ರಹಿಸುವ ದುಸ್ಥಿತಿ ಎದುರಾಗಿದೆ.
ಗ್ರಾಮಸ್ಥರು ಸುಮಾರು 3-4 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಶಕ್ತಿನಗರ, ಹರಿಜನ ಕೇರಿ, ಗೌಡರ ಕಾಲನಿ, ಹೊಸ ಪ್ಲಾಟ್ ಕೆಲವೆಡೆ ಅವೈಜ್ಞಾನಿಕವಾಗಿ ಜೆಜೆಎಂ ಕಾಮಗಾರಿಯಿಂದ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಸುಮಾರು 500ಕ್ಕೂ ಹೆಚ್ಚಿನ ಮನೆ, 5,000ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ ಗ್ರಾಮದಲ್ಲಿ ದಿನ ಬೆಳಗಾದರೆ ಬಡಾವಣೆಗಳ ನಾಗರಿಕರು ಕೊಡ ಹಿಡಿದು ನೀರು ಅರಸುವುದೇ ಕಾಯಕವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಕುರಿತು ಈಗಾಗಲೇ ಬೈಲವಾಡ ಪಿಡಿಒಗೆ ಮನವರಿಕೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಧಿಕಾರಿಗಳು ಇನ್ನಾದರೂ ಕುಡಿಯುವ ನೀರು ಪೂರೈಸಲಿ. ಶಕ್ತಿನಗರದಲ್ಲಿನ ಬಸ್ ಶೆಲ್ಟರ್‌ಗೆ ಬೆಳಕಿನ ವ್ಯವಸ್ಥೆ ಕಲ್ಪಿಸಲಿ, ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೈಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಡಾಲ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ನಾಗರಿಕರು ಸಮಸ್ಯೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ರಸ್ತೆ ರಿಪೇರಿ ಮಾಡುತ್ತಿರುವುದರಿಂದ ಅಭಿವದ್ಧಿ ಹಾಗೂ ಪರಿಹಾರ ವಿಳಂಬವಾಗಲಿದ್ದು ನಾಗರಿಕರು ಸಹಕರಿಸಬೇಕು.

— ಡಿ.ಬಿ.ರಾಯನಾಯ್ಕರ ಪಿಡಿಒ ಬೈಲವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net