ಬೆಳಗಾವಿ : ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಪ್ರಖ್ಯಾತಿ ಜತೆಗೆ ಉತ್ತಮ ಶ್ರೇಣಿ ಪಡೆಯಲು ಎಲ್ಲ ಪ್ರಾಧ್ಯಾಪಕರು, ಸಿಬ್ಬಂದಿ ಸಮರ್ಪಕವಾಗಿ ಶ್ರಮಿಸಬೇಕಿದೆ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಕರೆ ನೀಡಿದರು.
ವಿಟಿಯು ಆಂತರಿಕ ಗುಣಮಟ್ಟ ಭರವಸೆಯ ಕೋಶ(ಐಕ್ಯೂಎಸಿ)ವು ಎರಡು ದಿನ ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್‌ಬಿಎ) ಶ್ರೇಣಿ ಪಡೆಯುವ ಮಾನದಂಡ ಕುರಿತು ಪ್ರಾಧ್ಯಾಪಕ ವರ್ಗದವರಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ವಿವಿ ಸ್ಪರ್ಧಿಸಬೇಕಿದೆ. ಇದಕ್ಕೆ ಮತ್ತಷ್ಟು ಗುಣಮಟ್ಟತೆ ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ಉತ್ತಮ ಶ್ರೇಣಿಯ ಮಾನ್ಯತೆ ಪಡೆಯಲು ಒಳ್ಳೆಯ ಬೋಧನಾ ಕ್ರಮ ಅನುಸರಿಸಬೇಕು. ಆಡಳಿತ ವರ್ಗದವರು ಗುಣಮಟ್ಟದ ಕಟ್ಟಡಗಳು, ಅಗತ್ಯ ಸೌಕರ್ಯ ಒದಗಿಸಲು ಸಿದ್ಧರಿದ್ದೇವೆ. ಇದಕ್ಕೆ ಪೂರಕವಾಗಿ ಬೋಧನಾ ವಿಧಾನದಲ್ಲಿ ಮತ್ತಷ್ಟು ತಂತ್ರಜ್ಞಾನವನ್ನು ಅವಳಡಿಸಿಕೊಂಡು ಗುಣಮಟ್ಟ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಶಿಕ್ಷಣ ತಜ್ಞರಾದ ಡಾ.ಆರ್.ವಿ.ರಂಗನಾಥ, ಡಾ.ಡಿ.ಶೇಷಚಲಂ, ಡಾ.ರವಿರಾಜ ಕುಲಕರ್ಣಿ ಭಾಗವಹಿಸಿ, ಮಾನ್ಯತೆ ಪಡೆಯಲು ಅನುಸರಿಸಬೇಕಾದ ಮಾನದಂಡಗಳು, ಉದ್ಯೋಗಿಕ ಆಧಾರಿತ ಶಿಕ್ಷಣ, ವಿವಿ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಗುಣಮಟ್ಟ ಸುಧಾರಣೆಯ ಕ್ರಮಗಳ ಕುರಿತು ಚರ್ಚಿಸಿದರು.
ವಿಟಿಯು ಕುಲಸಚಿವರಾದ ಡಾ.ಪ್ರಸಾದ ಬಿ.ರಾಂಪುರೆ, ಪ್ರೊ.ಯು.ಜೆ.ಉಜ್ವಲ್, ಐಕ್ಯೂಎಸ್‌ಸಿ ನಿರ್ದೇಶಕ ಡಾ.ಸಂತೋಷ ನೇಜ್ಕರ್, ಪ್ರಾದೇಶಿಕ ಕಚೇರಿಯ ನಿರ್ದೇಶಕರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.