ಖರ್ಗೆ ಹೇಳಿಕೆ ಸಮರ್ಥಿಸಿಕೊಂಡ ಗುಂಡೂರಾವ್

 ದಿನೇಶ ಗುಂಡೂರಾವ್
ದಿನೇಶ ಗುಂಡೂರಾವ್
Published on
ಬೆಳಗಾವಿ : ಕರಾವಳಿಯಲ್ಲಿ ಕೋಮು ಗಲಭೆಗಳ ಕಾರಣಕ್ಕೆ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದಿರುವ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಯಲ್ಲಿ ಅರ್ಥವಿದೆ ಎಂದಿರುವ ಸಚಿವ ದಿನೇಶ ಗುಂಡೂರಾವ್, ನಮ್ಮ ಸರ್ಕಾರ ಅಲ್ಲಿನ ವಾತಾವರಣ ಸುಧಾರಿಸಲು ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ಬಳಿಕ ಕರಾವಳಿ ಭಾಗದ ವಾತಾವರಣ ಸುಧಾರಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದರಿಂದ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಬಂಡವಾಳ ಹೆಚ್ಚು ಹೂಡಲಿಕ್ಕೆ ಸತತ ಪ್ರಯತ್ನ ಮಾಡುತ್ತಿದ್ದೇವೆ. ಯಾರ ಪರ,ಯಾರ ವಿರೋಧವೂ ಇಲ್ಲ. ಯಾರು ಕಾನೂನು ವಿರುದ್ಧ ಹೋಗುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕರಾವಳಿ ಭಾಗದಲ್ಲಿ ಈಗ ಬಹಳಷ್ಟು ಸುಧಾರಣೆಯಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ ಎಂದು ಹೇಳಿದರು.
ಕರಾವಳಿ ಭಾಗದ ಪ್ರವಾಸೋದ್ಯಮ ದೃಷ್ಟಿಯಿಟ್ಟುಕೊಂಡು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಎಂಒವಿಗಳ ಬಗ್ಗೆ ಕಾರ್ಯಾಗಾರ ಮಾಡಿದ್ದೇವೆ. ಮೂರು ಪಂಚತಾರಾ ಹೋಟೆಲ್ಗಳು ಬರಲು ಮುಂದಾಗಿವೆ. ಐಟಿ ಕ್ಷೇತ್ರದಲ್ಲಿ ಕಿಯೋನಿಕ್ಸ್ ಐವತ್ತು ಕೋಟಿ ಹೂಡಿಕೆ ಮಾಡಿದೆ. ಮಂಗಳೂರು ಹೆಚ್ಚು ಆಕರ್ಷಿಸುವ ಜಿಲ್ಲೆಯಾಗಬೇಕಿದೆ. ಆದರೆ ಕೋಮುವಾದದಿಂದ ಅನೇಕ ಜನರಿಗೆ ಹಿನ್ನೆಡೆ ಆಗುತ್ತಿತ್ತು. ಈಗ ಜನರಿಗೆ ತಿಳಿವಳಿಕೆ ಹೇಳುವ ಪ್ರಯತ್ನ ನಡೆಯುತ್ತಿದೆ. ಸಾಮಾಜಿಕ ಜಾಲತಾಣ ಮೂಲಕ ದ್ವೇಷ ರಾಜಕಾರಣ ಮಾಡುವ ಕೆಲ ಸಂಘಟನೆಗಳನ್ನು ಇತಿಮೀತಿಯಲ್ಲಿಡಲಾಗಿದೆ. ಇದನ್ನೇ ಖರ್ಗೆ ಹೇಳಿದ್ದಾರೆ ಎಂದರು.
ಸಿಎಂ ಬದಲಾವಣೆ ಚರ್ಚೆ ಇಲ್ಲ:
ಸಿಎಂ ಬದಲಾವಣೆ ಬಗ್ಗೆ ಗಾಣಿಗ ರವಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆಸಿದ ಸಚಿವರು, ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಎಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ.ಸಾವಿರ ದಿನದ ಕಾರ್ಯಕ್ರಮವನ್ನೂ ಒಗ್ಗೂಡಿ ಮಾಡಿದ್ದೇವೆ. ಯಾವ ಭಿನ್ನಮತವೂ ಇಲ್ಲ. ಈಗಾಗಲೇ ಹೈಕಮಾಂಡ್ ನಿರ್ಧಾರದಂತೆ ನಡೆಯುವುದಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಳಿದ್ದಾರೆ. ಅವರು ಹೇಳಿದ ಮೇಲೆ ಮುಗಿತು, ಯಾರ ಮಾತನ್ನು ಈಗ ಚರ್ಚೆ ಮಾಡುವ ಅಗತ್ಯ ಇಲ್ಲ. ಎದುರಿಗೆ ಕ್ಯಾಮರಾ, ಮೈಕ್ ಹಿಡಿದಾಗ ಕೆಲವರ ಹೇಳಿಕೆ ಬರುತ್ತಿದೆಯಷ್ಟೇ ಹೊರತು ಯಾವುದೇ ಚರ್ಚೆ ಇಲ್ಲ. ಎಲ್ಲವೂ ಸುಶೂತ್ರವಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ವಿದೇಶ ಪ್ರವಾಸದ ವಿಚಾರವಾಗಿ ಅದು ವೈಯಕ್ತಿಕವಾಗಿ ಹೋಗುತ್ತಿದ್ದಾರೆ. ಪಕ್ಷದಿಂದ ಅಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net