ಬೆಳಗಾವಿ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಸಚಿವ ಎಂ.ಬಿ.ಪಾಟೀಲ ಯುವ ವಿಜ್ಞಾನ ಕೇಂದ್ರ ಉದ್ಘಾಟಿಸಿದರು. ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಡಾ.ಅಲ್ಲಮಪ್ರಭು ಸ್ವಾಮೀಜಿ, ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಇತರರಿದ್ದರು.
ಬೆಳಗಾವಿ: ಬೆಳಗಾವಿ ಗಡಿಯಲ್ಲಿ ಕನ್ನಡ ಉಳಿಯಲು ಮತ್ತು ಕರ್ನಾಟಕ ಏಕೀಕರಣಕ್ಕೆ ಶ್ರೀಮಠದ ಕೊಡುಗೆ ದೊಡ್ಡದಿದೆ. ನಾಗನೂರು ಮಠ, ವಚನ ಸಾಹಿತ್ಯ, ಬಸವ ಸಾಹಿತ್ಯಉಳಿದದ್ದು .ಗು.ಹಳಕಟ್ಟಿ ಅವರಿಂದ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಹಾಗೂ ತರಬೇತಿ ನೀಡುವ ಉದ್ದೇಶದಿಂದ ನಿರ್ಮಿಸಿರುವ ‘ಸ್ಟೆಮ್-ಎಚ್ ಯುವ ವಿಜ್ಞಾನ ಕೇಂದ್ರ’ ಉದ್ಘಾಟಿಸಿ ಮಾತನಾಡಿ, ನಾಗನೂರು ಮಠದ ಸೇವೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಸರ್ಕಾರದಿಂದ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.
ನಾಗನೂರು ರುದ್ರಾಕ್ಷಿ ಮಠದ ಶಿವಬಸವ ಶ್ರೀ ಹೆಸರನ್ನು ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ದಾಸೋಹ ತತ್ತ್ವದಲ್ಲಿ ನಂಬಿಕೆ ಇಟ್ಟಿರುವ ಮಠವು ಈಗ ಆಧುನಿಕ ಜ್ಞಾನ ಶಾಖೆಗಳ ಕಡೆಗೆ ಗಮನ ಹರಿಸಿರುವುದು ಸ್ವಾಗತಾರ್ಹ. ಈ ಕೇಂದ್ರ ಆರಂಭಿಸಿರುವುದು ಹೊಸ ಅಧ್ಯಾಯ ಎಂದರು.
ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಶ್ರೀಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ, ಧಾರವಾಡದ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಬೆಟ್ಟದಪುರದ ಸಲೀಲಾಖ್ಯ ವಿರಕ್ತಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಇತರರಿದ್ದರು.