ಜನ ಹಿತಕ್ಕಾಗಿ ಬದುಕಿನ ಮಹಾಚೇತನ ಶಿರಸಂಗಿ ಲಿಂಗರಾಜರು

ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಶನಿವಾರ ಜರುಗಿದ ಲಿಂಗರಾಜರ ಜಯಂತಿಯಲ್ಲಿ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು.
ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಶನಿವಾರ ಜರುಗಿದ ಲಿಂಗರಾಜರ ಜಯಂತಿಯಲ್ಲಿ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು.
Published on
ಬೆಳಗಾವಿ: ಜನತೆಯ ಹಿತಕ್ಕಾಗಿ ಬದುಕಿದ ಮಹಾಚೇತನ ಶಿರಸಂಗಿ ಲಿಂಗರಾಜರು. ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು, ಮುಂದೆ ಬರಬೇಕು, ಬದುಕಿನ ಕಷ್ಟಗಳನ್ನು ತೊಡೆದು ಹಾಕಬೇಕೆಂಬ ಸಂಕಲ್ಪದೊಂದಿಗೆ ಶಿಕ್ಷಣ ರಂಗಕ್ಕೆ ಆರ್ಥಿಕ ಮತ್ತು ಜ್ಞಾನದ ಶಕ್ತಿಯನ್ನು ತುಂಬಿದ ಮಹಾತ್ಮರು ಎಂದು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಬಣ್ಣಿಸಿದರು.
ಲಿಂಗರಾಜ ಕಾಲೇಜಿನಲ್ಲಿ ಶನಿವಾರ ಕೆಎಲ್‌ಇಯ ಎಲ್ಲ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಶಿರಸಂಗಿ ಲಿಂಗರಾಜರ 165ನೇ ಜಯಂತಿ ಉತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಿಗೆ ಕೊಡುವ ದಾನ ಶ್ರೇಷ್ಠವೆಂದು ತಿಳಿದಿದ್ದ ಅವರು ಸಮಾಜಕ್ಕೆ ಪ್ರೇರಕರಾದರು. ಅವರ ಇಚ್ಛೆಯಂತೆ ಪ್ರಾರಂಭವಾದ ಶಿರಸಂಗಿ ನವಲಗುಂದ ಟ್ರಸ್ಟ್ ಸಾವಿರಾರೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯ ಇಂದಿಗೂ ನೀಡುತ್ತಿದೆ. ಇಂತಹ ತ್ಯಾಗವೀರರ ವ್ಯಕ್ತಿತ್ವಕ್ಕೆ ಮಾರುಹೋದ ಕೆಎಲ್‌ಇ ಸಂಸ್ಥೆಯ ಸಪ್ತರ್ಷಿಗಳು ಅವರ ಆದರ್ಶವಟ್ಟಿಕೊಂಡು 1916ರಲ್ಲಿ ಸಂಸ್ಥೆ ಹುಟ್ಟುಹಾಕಿದರು. 1933ರಲ್ಲಿ ಪ್ರಥಮ ಪದವಿ ಕಾಲೇಜಿಗೆ ಲಿಂಗರಾಜರ ಹೆಸರನ್ನೇ ಟ್ಟಿರುವುದು ಅವರ ಮೇಲಿನ ಅಭಿಮಾನದಿಂದಾಗಿ ಎಂದು ವಿವರಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಯಲ್ಲಾಪುರ ವಿಶ್ವದರ್ಶನ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಡಿ.ಕೆ.ಗಾಂವಕರ ಮಾತನಾಡಿ, ಸಮಾಜದ ಕಲ್ಯಾಣಕ್ಕೆ ಶಿಕ್ಷಣವೇ ಮೂಲವೆಂದು ತಿಳಿದ ಲಿಂಗರಾಜರು ತಮ್ಮ ಇಡೀ ಸಂಪತ್ತನ್ನು ಶಿಕ್ಷಣಕ್ಕೆ ಮೀಸಲಾಗಿಟ್ಟಿದ್ದು ಭಾರತದ ಚರಿತ್ರೆಯಲ್ಲೇ ಅಪರೂಪ. ಸಮಾಜದ ಸುಖವೇ ತನ್ನ ಸುಖವೆಂದು ಎಲ್ಲವನ್ನೂ ಧಾರೆ ಎರೆದ ಲಿಂಗರಾಜರು ಸ್ವಾಮಿ ವಿವೇಕಾನಂದರಂತೆ ಅಲ್ಪಾವಧಿಯಲ್ಲಿ ನಮ್ಮನ್ನಗಲಿದರೂ ಲೋಕದಲ್ಲಿ ಅಮರವಾಗಿ ಉಳಿಯುವಂತ ಕಾರ್ಯ ಮಾಡಿದರು. ಅವರ ಬದುಕು ಸುಖದ ಸುಪತ್ತಿಕೆಯಾಗಿರಲಿಲ್ಲ. ಕೌಟುಂಬಿಕವಾಗಿ ಬವಣೆಗಳಿಂದ ನೊಂದಿದ್ದರು. ನೂರೆಂಟು ಕಷ್ಟ ಎದುರಿಸಿದ್ದರೂ ಕೊನೆಗೆ ತಮ್ಮ ಚಿರಾಸ್ಥಿಯನ್ನು ಸಮಾಜದ ಮಕ್ಕಳ ಕಲ್ಯಾಣಕ್ಕಾಗಿ ಸಮರ್ಪಿಸಿದರು. ಕೃಷಿ, ನೀರಾವರಿ ಸೇರಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂತಹ ಪ್ರಾಥಃಸ್ಮರಣೀಯರು ಇಂದಿನ ಯುವ ಪೀಳಿಗೆಗೆ ಅನುಕರಣೀಯರು. ಇಂದು ಕೆಎಲ್‌ಇಯ ಎಲ್ಲ ಅಂಗ ಸಂಸ್ಥೆಗಳಲ್ಲಿ ಜಯಂತಿ ಆಚರಿಸಿ ಮಕ್ಕಳಲ್ಲಿ ಅವರ ದಾನ, ತ್ಯಾಗದ ಕುರಿತು ಹೇಳುತ್ತಿರುವುದು ಪ್ರಶಂಸನೀಯ ಕಾರ್ಯ ಎಂದರು.
ಸಾನ್ನಿಧ್ಯವಹಿಸಿದ್ದ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಲಿಂಗರಾಜರಂತಹ ಪುಣ್ಯಾತ್ಮರನ್ನು ಸ್ಮರಿಸುವುದು ನಿಜಮುಕ್ತಿಯಿದ್ದಂತೆ. ಲಿಂಗರಾಜರು ತಮ್ಮ ಜನಮುಖಿಯಾದ ಸೇವೆಗಳಿಂದ ಅಮರತ್ವವನ್ನು ಪಡೆದರು. ಸಮಸ್ತ ನಾಡಿಗೆ ಅವರು ನೀಡಿದ ಕೊಡುಗೆ ಅನನ್ಯ ಅನುಪಮ. ಅವರಂತಹ ದಾನಿಗಳು ಯುಗಯುಗಗಳು ಕಳೆದರೂ ಮತ್ತೇ ಬರುವುದು ದುರ್ಲಭ. ಲಿಂಗರಾಜರು ದಾನ ಅಷ್ಟೇ ಅಲ್ಲದೆ ಬದುಕಿನುದ್ದಕ್ಕೂ ಅನೇಕ ಜನೋಪಯೋಗಿ ಕಾರ್ಯಗಳನ್ನು ನಿರ್ವಹಿಸಿದರು. ಲಿಂಗರಾಜರ ತ್ಯಾಗದಲ್ಲಿ ಒಂದು ವೈಶಿಷ್ಟ್ಯವುಂಟು, ಸ್ವಾರ್ಥವನ್ನು ಸಂಪೂರ್ಣವಾಗಿ ಮರೆತು ತಮ್ಮ ಇಡೀ ಆಸ್ತಿಯನ್ನು ಸಮಾಜದ ಶಿಕ್ಷಣಕ್ಕಾಗಿ ಧಾರೆಯೆರೆದರು. ಅಂತಹ ಮಹಾತ್ಮರನ್ನು ಇಂದಿನ ಯುವಪೀಳಿಗೆ ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ನುಡಿದರು.
ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ವೇದಿಕೆಯದ್ದರು. ಮಾಹೇಶ್ವರ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಯಂತಿ ಉತ್ಸವದ ನಿಮಿತ್ತ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಕ್ತಭಂಡಾರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 50ಕ್ಕೂ ಹೆಚ್ಚು ಯುನಿಟ್ ರಕ್ತ ದಾನಿಗಳಿಂದ ಸಂಗ್ರಹವಾಯಿತು.
ಡಾ.ಎಚ್.ಬಿ.ರಾಜಶೇಖರ, ಡಾ.ಮಹಾಂತೇಶ ರಾಮಣ್ಣವರ, ಪ್ರೊ.ಕರಡಿಗುದ್ದಿ, ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷೆ ಸುಧಾ ಉಪ್ಪಿನ, ಸದಸ್ಯರಾದ ರಾಜೇಶ್ವರಿ ಸಂಬರಗಿಮಠ, ಎಫ್.ಎಂ.ಮಹಾಂತಶೆಟ್ಟಿ ಇತರರಿದ್ದರು.
ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು.
ಕೆಎಲ್‌ಇ ಉಪಾಧ್ಯಕ್ಷ ಬಸವರಾಜ ತಟವಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹೇಶ ಗುರನಗೌಡರ ಹಾಗೂ ಪ್ರೊ.ಸಿದ್ಧನಗೌಡ ಪಾಟೀಲ ನಿರೂಪಿಸಿದರು. ಡಾ.ಎಚ್.ಎಂ.ಚೆನ್ನಪ್ಪಗೋಳ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net