ಪಾಲಿಕೆ ಆಸ್ತಿ ಪತ್ತೆಗೆ ಹರಸಾಹಸ!

ಪಾಲಿಕೆ
ಪಾಲಿಕೆ
Published on
ಬೆಳಗಾವಿ ಇಲ್ಲಿನ ಮಹಾನಗರ ಪಾಲಿಕೆ ಒಡೆತನದಲ್ಲಿರುವ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಗಾಗಿ ಹರಸಾಹಸ ಪಡುತ್ತಿರುವ ಕಂದಾಯ ವಿಭಾಗದ ಅಧಿಕಾರಿಗಳು ಆಸ್ತಿ ರಿಜಿಸ್ಟ್ರಾರ್, ಠರಾವು ಪ್ರತಿಗಳ ಪರಿಶೀಲನೆಗೆ ಮುಂದಾಗಿದೆ.
ನಗರದ ಹೃದಯಭಾಗದಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿಗಳು, ಗುತ್ತಿಗೆ ಅವಧಿ ಮುಗಿದಿರುವ ಆಸ್ತಿಗಳಿವೆ. ಆದರೆ, ಇದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆ 1975ರಿಂದ 2025ರ ನಡುವಿನ ಅವಧಿಯಲ್ಲಿ ಆಸ್ತಿ ರಿಜಿಸ್ಟ್ರಾರ್‌ನಲ್ಲಿ ದಾಖಲಾಗಿರುವ ಮತ್ತು ಸಾರ್ವಜನಿಕ ಆಸ್ತಿ ಗುತ್ತಿಗೆ ನೀಡಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೈಗೊಂಡಿರುವ ಠರಾವು ಪ್ರತಿಗಳನ್ನು ಪರಿಶೀಲನೆಗೆ ನಿರ್ಧರಿಸಿದೆ. ಇದಕ್ಕಾಗಿ ಅಧಿಕಾರಿಗಳ ವಿಶೇಷ ತಂಡ ರಚನೆಗೆ ಕ್ರಮ ವಹಿಸಿದೆ.
ಈಗಾಗಲೇ ಪಾಲಿಕೆ ಒಡೆತನದ ಆಸ್ತಿ ಸೇರಿ ಸಾಮಾಜಿಕ ಸೇವಾ ಉದ್ದೇಶಕ್ಕೆ ಮೀಸಲಿಟ್ಟಿರುವ ಜಾಗಗಳನ್ನು ಖಾಸಗಿ ಸಂಸ್ಥೆಗಳಿಗೆ ಭೋಗ್ಯ, ಬಾಡಿಗೆ ಆಧಾರದ ಮೇಲೆ 110ಕ್ಕೂ ಅಧಿಕ ಆಸ್ತಿ ನೀಡಲಾಗಿದ್ದು, ಈ ಪೈಕಿ 70ಕ್ಕೂ ಅಧಿಕ ಆಸ್ತಿಗಳ ಗುತ್ತಿಗೆ ಅವಧಿ ಮುಗಿದು ಎರಡು ವರ್ಷ ಕಳೆದಿವೆ. ಆದರೆ, ಇಂತಹ ಆಸ್ತಿ ವಶಕ್ಕೆ ಪಡೆದುಕೊಳ್ಳಲು ಸೂಕ್ತ ದಾಖಲೆಗಳು ಸಿಗುತ್ತಿಲ್ಲ. ಕೆಲ ಆಸ್ತಿ ಖಾಸಗಿ ವ್ಯಕ್ತಿ, ಸಂಸ್ಥೆ ಹೆಸರಿಗೆ ದಾಖಲಾಗಿವೆ. ಇದರಿಂದಾಗಿ ಪಾಲಿಕೆಗೆ ಮಾಸಿಕ ಲಕ್ಷಾಂತರ ರೂ. ಆದಾಯ ನಷ್ಟವಾಗುತ್ತಿದೆ.
2002ರಿಂದ 2020ರ ನಡುವಿನ ಅವಧಿಯಲ್ಲಿ ಪಾಲಿಕೆ ಸಾಕಷ್ಟು ಆಸ್ತಿಗಳನ್ನು ಮನಬಂದಂತೆ ಗುತ್ತಿಗೆ ನೀಡಿದೆ. ಅಂತಹ ಆಸ್ತಿಗಳನ್ನು ಕೆಲವರು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಇನ್ನೂ ಕೆಲವರು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಮಾಸಿಕ 2ರಿಂದ 3 ಲಕ್ಷ ರೂ. ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಸಾಮಾಜಿಕ ಸೇವೆ ಹೆಸರಿನಲ್ಲಿ ಆಸ್ತಿ ಪಡೆದು ಖಾಸಗಿ ವ್ಯಕ್ತಿಗಳ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇಂತಹ ಆಸ್ತಿಗಳನ್ನು ಮರಳಿ ಪಡೆದುಕೊಳ್ಳಲು ಕಂದಾಯ ವಿಭಾಗ ಅಧಿಕಾರಿ ವರ್ಗ ಕ್ರಮ ವಹಿಸಿಲ್ಲ. ನೋಟಿಸ್ ಕೂಡ ನೀಡಿಲ್ಲ. ಹೀಗಾಗಿ ಕೆಲವರು ಕೋರ್ಟ್ ಮೂಲಕ ಆಸ್ತಿಗಳನ್ನು ತಮ್ಮಂತೆ ಮಾಡಿಕೊಂಡಿದ್ದಾರೆ.
"

ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ಆಸ್ತಿಯ ದಾಖಲೆ ಪರಿಶೀಲಿಸಲಾಗುತ್ತಿದೆ. ಗುತ್ತಿಗೆ ಅವಧಿ ಮುಗಿದಿರುವ, ಒತ್ತುವರಿ ಹಾಗೂ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಆಸ್ತಿ ಪತ್ತೆಗೆ ಕ್ರಮ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net