ಗ್ರಾಮದೇವಿ ಜಾತ್ರಾ ಮಹೋತ್ಸವದ ಎಂಟನೇ ದಿನ ಸೋಮವಾರ ನಗರದಲ್ಲಿ ಭಕ್ತಿ, ಧಾರ್ಮಿಕ ವಿಧಿವಿಧಾನಗಳು ಹಾಗೂ ಉಡಿ ತುಂಬುವ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ವೈಶಾಖ ಕೃಷ್ಣ ನವಮಿ ಅಂಗವಾಗಿ ಬೆಳಗ್ಗೆ 4 ಗಂಟೆಯಿಂದ ದೇವಿಕಟ್ಟೆಯಲ್ಲಿ ಮಹಾಗಣಪತಿ ಪೂಜೆ ಹಾಗೂ ಸ್ಕಂದಮಾತಾ ದೇವಿ, ಕಾತ್ಯಾಯನಿ ದೇವಿ ಹೋಮಗಳು ವೈದಿಕ ಮಂತ್ರೋಚ್ಚಾರಗಳೊಂದಿಗೆ ಜರುಗಿದವು. ಭಕ್ತರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ವೃದ್ಧಿಯಾಗಲೆಂಬ ಉದ್ದೇಶದಿಂದ ವಿಶೇಷ ಪೂಜೆ ನೆರವೇರಿದವು. ಬೆಳಗ್ಗೆ 8 ಗಂಟೆಯಿಂದ ನಗರದ ವಿವಿಧ ಓಣಿಗಳ ಭಕ್ತರು ವಾದ್ಯಮೇಳಗಳೊಂದಿಗೆ ದೇವಿಕಟ್ಟೆಗೆ ಆಗಮಿಸಿ ದೇವಿಗೆ ಉಡಿ ತುಂಬಿದರು. ಶಾಂತಿನಗರ, ವಾಟರ್ ಸಪ್ಲೈ ಭಾಗ, ಬಸವಸದನ, ಬೈಪಾಸ್ ರಸ್ತೆ, ಕೊಳ್ಳಾರ ಓಣಿ, ಮೇದಾರ ಓಣಿ, ಕಂಬಾರ ಓಣಿ, ಸಮಗಾರ ಓಣಿ, ಆನಿ ಆಗಸಿ, ಅಲಾರಕಿ ಓಣಿ, ಚಿನಿವಾಲರ ಓಣಿ, ದಾಸರ ಓಣಿ, ಅಂಬೇಡ್ಕರ ನಗರ, ಮಾದರ ಓಣಿ, ವಕ್ಕುಂದದೇವರ ಓಣಿ, ಮೊಕಾಶಿ ಓಣಿ ಹಾಗೂ ಬಂಡಿ ಓಣಿಗಳ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.