ಎಕರೆಗೆ ನೂರು ಟನ್ ಕಬ್ಬು ಬೆಳೆಯಲು ಕ್ರಾಂತಿಕಾರಿ ಹೆಜ್ಜೆ

 ಬೈಲಹೊಂಗಲ ತಾಲೂಕಿನ ಚಚಡಿಯಲ್ಲಿ ಜರುಗಿದ ಸಮಗ್ರ ಕಬ್ಬು ನಿರ್ವಹಣಾ ತರಬೇತಿಯಲ್ಲಿ ಡಾ.ಮಂಜುನಾಥ ಚೌರಡ್ಡಿ ಮಾತನಾಡಿದರು. ಬಾಳಪ್ಪ ಶೇಗುಣಶಿ, ಡಾ.ಸೌರಭ ಮುನವಳ್ಳಿ ಇತರರಿದ್ದರು.
ಬೈಲಹೊಂಗಲ ತಾಲೂಕಿನ ಚಚಡಿಯಲ್ಲಿ ಜರುಗಿದ ಸಮಗ್ರ ಕಬ್ಬು ನಿರ್ವಹಣಾ ತರಬೇತಿಯಲ್ಲಿ ಡಾ.ಮಂಜುನಾಥ ಚೌರಡ್ಡಿ ಮಾತನಾಡಿದರು. ಬಾಳಪ್ಪ ಶೇಗುಣಶಿ, ಡಾ.ಸೌರಭ ಮುನವಳ್ಳಿ ಇತರರಿದ್ದರು.
Published on
ಬೆಳಗಾವಿ : ಪ್ರತಿ ಗ್ರಾಮದ 25 ಯುವ ರೈತರನ್ನು ಆಯ್ಕೆ ಮಾಡಿ ಎಕರೆಗೆ ನೂರು ಟನ್ ಇಳುವರಿ ಪಡೆಯುವ ವಿಶೇಷ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಕೆವಿಕೆ ಮತ್ತು ಇನಾಂದಾರ್ ಶುಗರ್ಸ್ ಜಂಟಿಯಾಗಿ ಸಿಒ86032 ತಳಿಯ ಪೌಂಢೇಶನ್ ಸಸಿಗಳನ್ನು ಸಿದ್ಧಪಡಿಸಿ ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಹೇಳಿದರು.
ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಇನಾಂದಾರ್ ಶುಗರ್ಸ್ ಜಂಟಿ ಆಶ್ರಯದಲ್ಲಿ ಚಚಡಿ ಮತ್ತು ಹಿರೇಬೂದನೂರು ಏರ್ಪಡಿಸಿದ್ದ ಸಮಗ್ರ ಕಬ್ಬು ನಿರ್ವಹಣಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಸಾಯನಿಕ ಗೊಬ್ಬರಗಳ ವೆಚ್ಚವನ್ನು ಶೇ.30ರಷ್ಟು ಕಡಿತಗೊಳಿಸಲು ಕೆವಿಕೆಯಿಂದ ಉತ್ತಮ ಗುಣಮಟ್ಟದ ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕಗಳನ್ನು ಉತ್ಪಾದಿಸಿ ನೀಡಲಾಗುತ್ತಿದೆ. ಆಯ್ಕೆಯಾದ ಯುವ ರೈತರ ಹೊಲಗಳಿಗೆ ಪ್ರತಿ 15 ದಿನಕ್ಕೊಮ್ಮೆ ಕೆವಿಕೆ ವಿಜ್ಞಾನಿಗಳು ಭೇಟಿ ನೀಡಿ, ಸೂಕ್ತ ಮಾರ್ಗದರ್ಶನ ನೀಡುವ ಮೂಲಕ 100 ಟನ್ ಇಳುವರಿ ಗುರಿ ತಲುಪಲು ನೆರವಾಗಲಿದ್ದಾರೆ ಎಂದು ತಿಳಿಸಿದರು.
ತೆನಿಕೊಳ್ಳದ ಕೆಎಲ್‌ಇ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸೌರಭ ಮುನವಳ್ಳಿ ಮಾತನಾಡಿ, ಕಬ್ಬು ಬೆಳೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯ ಕುರಿತು ಮಾಹಿತಿ ನೀಡಿ, ತಮ್ಮ ಕಾಲೇಜ್ ಆವರಣದಲ್ಲಿ ಈಗಾಗಲೇ ಅನುಷ್ಠಾನಗೊಳಿಸಲಾಗಿರುವ ಎಐ-ಆಧಾರಿತ ಕಬ್ಬಿನ ಪ್ರಾತ್ಯಕ್ಷಿಕಾ ತೋಟಕ್ಕೆ ಭೇಟಿ ನೀಡಲು ಸ್ಥಳೀಯ ರೈತರಿಗೆ ಆಹ್ವಾನ ನೀಡಿದರು.
ಇನಾಂದಾರ್ ಶುಗರ್ಸ್‌ ಕಬ್ಬು ವಿಭಾಗದ ವ್ಯವಸ್ಥಾಪಕ ಬಾಳಪ್ಪ ಶೇಗುಣಶಿ ಮಾತನಾಡಿ, ಕಾರ್ಖಾನೆಯಿಂದ ಆರಂಭಿಸಲಾಗಿರುವ ‘ಕಿಸಾನ್ ಬಜಾರ್’ ಸೌಲಭ್ಯವನ್ನು ರೈತರು ಸದುಪಯೋಗಪಡಿಸಿಕೊಳ್ಳಲು ಕೋರಿದರು.
ಪ್ರಗತಿಪರ ರೈತ ನಾಗರಾಜ ದೇಸಾಯಿ ಸೇರಿದಂತೆ ಸ್ಥಳೀಯ ನಾಯಕರು ಹಾಗೂ ಅಪಾರ ಸಂಖ್ಯೆಯ ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net