ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ; ರಾಹುಲ ಶಿಂಧೆ ತಂತ್ರ ಯಶಸ್ಸು

ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಜತೆಗೆ ಸಿಇಒ ರಾಹುಲ ಶಿಂಧೆ ಚರ್ಚೆ. ಲೀಲಾವತಿ ಹಿರೇಮಠ ಇತರರಿದ್ದರು
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಜತೆಗೆ ಸಿಇಒ ರಾಹುಲ ಶಿಂಧೆ ಚರ್ಚೆ. ಲೀಲಾವತಿ ಹಿರೇಮಠ ಇತರರಿದ್ದರು
Published on
ಬೆಳಗಾವಿ: ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಾಣವಾಗಿದ್ದು, ಜಿಪಂ ಸಿಇಒ ರಾಹುಲ ಶಿಂಧೆ ರೂಪಿಸಿದ ವಿನೂತನ ಕಾರ್ಯತಂತ್ರಗಳು ಈ ಬಾರಿ ಸ್ಪಷ್ಟ ಫಲಿತಾಂಶ ನೀಡಿವೆ. ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು 100ಕ್ಕೆ 100ರಷ್ಟು ಸಾಧಿಸುವ ಗುರಿಯೊಂದಿಗೆ ಕೈಗೊಂಡ ಕ್ರಮಗಳು ಯಶಸ್ವಿಯಾಗಿವೆ.
ವಿದ್ಯಾರ್ಥಿಗಳ ಓದು ಕೌಶಲ್ಯದ ಜತೆಗೆ ಬರವಣಿಗೆ ಸಾಮರ್ಥ್ಯವನ್ನು ಹೆಚ್ಚಿಸುವತ್ತ ವಿಶೇಷ ಗಮನ ಹರಿಸಲಾಗಿದ್ದು, ಪ್ರತೀ ಶನಿವಾರ ಪಾಲಕರ ಸಭೆ ಆಯೋಜಿಸಿ ಮಕ್ಕಳ ವೈಯಕ್ತಿಕ ಕಲಿಕಾ ಮಟ್ಟವನ್ನು ಗುರುತಿಸಲಾಗಿದೆ. ‘ಮಿಷನ್‌-40’ ಹಾಗೂ ‘ಮಿಷನ್‌-80’ ಯೋಜನೆಗಳ ಮೂಲಕ ದುರ್ಬಲ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯ ಮಾರ್ಗದರ್ಶನ ನೀಡಲಾಗಿದೆ.
ಶೈಕ್ಷಣಿಕ ವರ್ಷದಲ್ಲೇ ಡಿಸೆಂಬರ್ ಅಂತ್ಯದೊಳಗೆ ಪಠ್ಯಕ್ರಮವನ್ನು ಪೂರ್ಣಗೊಳಿಸಿ, ನಂತರದ ಎರಡು ತಿಂಗಳುಗಳನ್ನು ಅಭ್ಯಾಸ ಮತ್ತು ಮೌಲ್ಯಮಾಪನಕ್ಕೆ ಮೀಸಲಿಟ್ಟ ಕ್ರಮವೂ ಫಲ ನೀಡಿದೆ. ವಾರಂವಾರ ಮಾದರಿ ಪ್ರಶ್ನೆಪತ್ರಿಕೆಗಳು, ನಿರಂತರ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿವೆ.
ಈ ಎಲ್ಲ ಸಮಗ್ರ ಕ್ರಮಗಳ ಪರಿಣಾಮವಾಗಿ ಸರ್ಕಾರಿ ಪ್ರೌಢಶಾಲೆಗಳು ಮತ್ತು ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.90ರಷ್ಟು ಸುಧಾರಣೆ ಕಂಡುಬಂದಿದೆ ಎಂದು ಡಿಡಿಪಿಐ ಲೀಲಾವತಿ ಹಿರೇಮಠ  ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net