ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ

 ಬೈಲಹೊಂಗಲ ತಾಲೂಕಿನ ಕೆಂಗನೂರು ಗ್ರಾಮದಲ್ಲಿ ಸೋಮವಾರ ಬಸವರಾಜ ಹೆಗ್ಗನಾಯಕ ಕಸ ವಿಲೇವಾರಿ ಘಟಕ ಕಾರ್ಯ ಪರಿಶೀಲಿಸಿದರು. ಸಂಜು ಜುನ್ನೂರ, ಎಚ್.ವಿಶ್ವನಾಥ ಇತರರಿದ್ದರು.
ಬೈಲಹೊಂಗಲ ತಾಲೂಕಿನ ಕೆಂಗನೂರು ಗ್ರಾಮದಲ್ಲಿ ಸೋಮವಾರ ಬಸವರಾಜ ಹೆಗ್ಗನಾಯಕ ಕಸ ವಿಲೇವಾರಿ ಘಟಕ ಕಾರ್ಯ ಪರಿಶೀಲಿಸಿದರು. ಸಂಜು ಜುನ್ನೂರ, ಎಚ್.ವಿಶ್ವನಾಥ ಇತರರಿದ್ದರು.
Published on
ಬೆಳಗಾವಿ:ಬಯಲು ಶೌಚ ಮುಕ್ತ ಗ್ರಾಮ ನಿರ್ಮಾಣ ಎಲ್ಲರ ಜವಾಬ್ದಾರಿ. ಪ್ರತಿಯೊಬ್ಬರೂ ಶೌಚಗೃಹ ಬಳಕೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಪಂ ಕಾರ್ಯದರ್ಶಿ (ಆಡಳಿತ) ಬಸವರಾಜ ಹೆಗ್ಗನಾಯಕ ಹೇಳಿದರು.
ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ, ಸಂಪಗಾವ, ಕೆಂಗನೂರು ಹಾಗೂ ವನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ನೀರಿನ ಅಭಾವ, ಮೂಢನಂಬಿಕೆ ಹೀಗೆ ಕುಂಟು ನೆಪದಲ್ಲಿ ಬಹುತೇಕ ಜನರು ಶೌಚಗೃಹ ಬಳಕೆಗೆ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಬಯಲುಶೌಚ ಮುಕ್ತಕ್ಕಾಗಿ ಸರ್ಕಾರ ಪ್ರತಿಯೊಂದು ಮನೆಗೆ ಶೌಚಗೃಹ ಕಡ್ಡಾಯಗೊಳಿಸಿ ಸಹಾಯಧನ ಸೌಲಭ್ಯ ಕಲ್ಪಿಸಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು.
ತಾಪಂ, ಗ್ರಾಪಂ ಅಧಿಕಾರಿ, ಸಿಬ್ಬಂದಿ ವರ್ಗ ಜನರಿಗೆ ಸರ್ಕಾರಿ ಪ್ರತಿಯೊಂದು ಸೌಲಭ್ಯ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರ್ಕಾರದ ಜನಪರ ಯೋಜನೆಗಳು ಪ್ರತಿಯೊಬ್ಬರಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ಈ ವಿಷಯದಲ್ಲಿ ವಿಳಂಬ ಮಾಡಿ ಜನರಿಗೆ ಕಿರುಕುಳ ನೀಡಬೇಡಿ. ವಸತಿ ಸೇರಿ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸೌಲಭ್ಯ ತಲುಪಿಸುವಂತೆ ಮಾಡಬೇಕು. ಹಾಗೇ ಗ್ರಾಮೀಣ ಭಾಗದ ಜನರು ಕೂಡ ಆರೋಗ್ಯಕರ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಗ್ರಾಮಗಳಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಗ್ರಾಮ ಪಂಚಾಯತಿ ಕಸ ಸಂಗ್ರಹಣೆ ವಾಹನಕ್ಕೆ ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು. ಸಾರ್ವಜನಿಕ ಗ್ರಂಥಾಲಯಗಳ ಸದುಪಯೋಗ ಪಡೆದು ವಿದ್ಯಾರ್ಥಿಗಳು ಹಾಗೂ ಯುವಕರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸರ್ಕಾರಿ ಶಾಲೆಗಳು, ಆರೋಗ್ಯ ಕೇಂದ್ರಗಳು ಹಾಗೂ ಪಶು ಆಸ್ಪತ್ರೆಗಳ ಸೇವೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮೃದ್ಧ ಗ್ರಾಮವಾಗಿ ರೂಪಿಸಬೇಕು.ಸರ್ಕಾರದ ಸೌಲಭ್ಯಗಳನ್ನು ಜನರು ಪರಿಣಾಮಕಾರಿಯಾಗಿ ಬಳಸಿಕೊಂಡಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಬೈಲಗೊಂಗಲ ತಾಪಂ ಇಒ ಸಂಜು ಜುನ್ನೂರ,ವಿಜಯಲಕ್ಷ್ಮೀ ಅನಿಗೋಳ, ಎಚ್.ವಿಶ್ವನಾಥ, ಎಸ್.ಕಲ್ಲೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net