ಬೆಳಗಾವಿ: ಸಕ್ಕರೆ ಸಂಸ್ಕರಣೆಗೆ ಉಪಯೋಗಿಸುವ ಗಂಧಕ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಸಕ್ಕರೆ ಕಾರ್ಖಾನೆಗಳು ಹಳೆಯ ಗಂಧಕ ಉಪಯೋಗ ಪದ್ಧತಿಗೆ ಪರ್ಯಾಯವಾಗಿ ಹೊಸ ತಂತ್ರಜ್ಞಾನ ಮತ್ತು ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸಕ್ಕರೆ ತಂತ್ರಜ್ಞ ಡಾ.ಎಂ.ಬಿ.ಲೋಂಡೆ ಹೇಳಿದರು.
ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಬುಧವಾರ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ ಇಂಡಸ್ಟ್ರೀಜ್ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ಸಕ್ಕರೆ ಪ್ರಕ್ರಿಯೆಯಲ್ಲಿ ಗಂಧಕದ ಕಡಿತಕ್ಕೆ ಪರ್ಯಾಯಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳವರು ಕಡಿಮೆ ಗಂಧಕ ಬಳಕೆ ಮೂಲಕ ಗುಣಟಮಟ್ಟದ ಸಕ್ಕರೆ ಉತ್ಪಾದಿಸುವ ಹೊಸ ಮಾರ್ಗೋಪಾಯಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ತಾಂತ್ರಿಕ ಸಲಹೆಗಾರ ಸಿ.ಬಿ.ಪಾಟೀಲ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಸಲ್ಪರ್ ಬಳಕೆ ಕಡಿಮೆ ಮಾಡಿದಲ್ಲಿ ಭವಿಷ್ಯದಲ್ಲಿ ಆಗುವ ಉಪಯೋಗಗಳ ಬಗ್ಗೆ ವಿವರಿಸಿದರು.
ನಿರಾಣಿ ಸಮೂಹ ಸಂಸ್ಥೆಯ ಹಿರಿಯ ಸಕ್ಕರೆ ತಂತ್ರಜ್ಞ ಆರ್.ವಿ.ವಾಟ್ನಾಳ, ಆರ್.ಬಿ.ಚಾಂದಗುಡೆ, ವಿ.ಎಂ.ಕುಲಕರ್ಣಿ, ಶ್ರೀಧರ ಪುಲಾಟೆ, ಅನೀಲ ಪೋರೆ, ಸೇರಿದಂತೆ 8 ಜನ ಸಕ್ಕರೆ ತಂತ್ರಜ್ಞರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.
ರಾಹುಲ ಪಾಟೀಲ ನಿರೂಪಿಸಿದರು. ಶಂಕರ ಧರ್ಮಟ್ಟಿ ವಂದಿಸಿದರು. ರಾಜ್ಯ ಹಾಗೂ ನೆರೆಯ ರಾಜ್ಯಗಳ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 100ಕ್ಕೂ ಅಧಿಕ ರಾಸಾಯನಿಕ ತಂತ್ರಜ್ಞರು ಭಾಗವಹಿಸಿದ್ದರು.