ಕನ್ನಡಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ

 ಬೆಳಗಾವಿ ನಾಗನೂರು ರುದ್ರಾಕ್ಷಿಮಠದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಡಾ.ಅಲ್ಲಮಪ್ರಭು ಸ್ವಾಮೀಜಿ, ಅಶೋಕ ಚಂದರಗಿ, ಮಹಾದೇವ ತಳವಾರ ಇತರರಿದ್ದರು.
ಬೆಳಗಾವಿ ನಾಗನೂರು ರುದ್ರಾಕ್ಷಿಮಠದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಡಾ.ಅಲ್ಲಮಪ್ರಭು ಸ್ವಾಮೀಜಿ, ಅಶೋಕ ಚಂದರಗಿ, ಮಹಾದೇವ ತಳವಾರ ಇತರರಿದ್ದರು.
Published on
ಬೆಳಗಾವಿ :
ಬೆಳಗಾವಿ ಮತ್ತು ಕನ್ನಡಕ್ಕಾಗಿ ಎಂತಹುದೇ ಹೋರಾಟ ಬಂದರೂ ಅದಕ್ಕೆ ನಾವು ಬದ್ಧ. ಪ್ರಾಣತ್ಯಾಗಕ್ಕೂ ತಾವು ಸಿದ್ಧವಿರುವುದಾಗಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ ಘೋಷಿಸಿದರು.
ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ಗೊತ್ತುವಳಿ ಮಂಡಿಸಲು ಒತ್ತಡ ಹಾಕುವುದು ಸೇರಿದಂತೆ ಗಡಿ, ನೆಲ ಮತ್ತು ಜಲದ ಕುರಿತಾಗಿ ತಮ್ಮ ಮಠದಲ್ಲಿ ಜರುಗಿದ ಕನ್ನಡಪರ ಸಂಘಟಕರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕರ್ನಾಟಕದಲ್ಲೇ ಉಳಿಯಲು ಲಿಂಗೈಕ್ಯ ಶಿವಬಸವ ಸ್ವಾಮೀಜಿ ಮಾಡಿದ ಹೋರಾಟ ಮರೆಯಲಾಗದು. ಅವರು ಬೆಳಗಾವಿಗೆ ಬಾರದಿದ್ದಲ್ಲಿ, ಇದು ಕನ್ನಡದ ನೆಲದಲ್ಲಿ ಉಳಿಯುತ್ತಿರಲಿಲ್ಲ. ಅವರು ಮರಾಠಿ ಗುಂಡಾಗಳಿಂದ ಅನುಭವಿಸಿದ ನೋವು ಮರೆಯಲಾಗದು. ಆದರೆ, ಇಷ್ಟು ವರ್ಷಗಳ ನಂತರವೂ ಮತ್ತೆ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ದುರ್ದೈವದ ವಿಚಾರ ವಿಷಾದ ವ್ಯಕ್ತಪಡಿಸಿದರು.
ಕನ್ನಡದ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲ ಮಠವು ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತ ಬಂದಿದೆ. ಪ್ರಸ್ತುತ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸೂರ್ಯ ಚಂದ್ರರು ಇರುವವರೆಗೂ ಯಾರು ಅಲ್ಲಗಳೆಯರಾಗದು. ಆದರೆ, ಬೆಳಗಾವಿ ನಮ್ಮದು ಎಂದು ಸಾಬೀತುಪಡಿಸುವ ಪರಿಸ್ಥಿತಿ ಎದುರಾಗಿದ್ದು ದುರದೃಷ್ಟಕರ. ಪಾಲಿಕೆಯಲ್ಲಿ ಕನ್ನಡಿಗರೇ ಅಧಿಕಾರದಲ್ಲಿದ್ದರೂ ಈ ಕುರಿತು ತರಾವು ಪಾಸ್ ಮಾಡುವಲ್ಲಿ ಯಾಕೆ ಹಿಂದೇಟು ಹಾಕುತ್ತಿದ್ದಾರೆ? ಇದಕ್ಕಾಗಿ ಕಳೆದ ನಡೆಯುತ್ತಿರುವ ಹೋರಾಟಕ್ಕೆ ಮಠದ ಬೆಂಬಲವೂ ಇದೆ ಈ ಕುರಿತು ಮಹಾಪೌರ ಹಾಗೂ ಉಪ ಮಹಾಪೌರರೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ಮಹಾದೇವ ತಳವಾರ, ಶ್ರೀನಿವಾಸ ತಾಳೂಕರ, ಬಲರಾಮ ಮಾಸೇನಟ್ಟಿ, ವಾಜೀದ್ ಹಿರೇಕೋಡಿ, ಪಾಲಿಕೆ ಸದಸ್ಯರಾದ ರಮೇಶ ಸೊಂಟಕ್ಕಿ, ದಿನೇಶ ನಾಶಿಪುಡಿ, ಸಾಹಿತಿ ನೀಲಗಂಗಾ ಚರಂತಿಮಠ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
ℹ️

ಚಂದ್ರಶೇಖರ ಸ್ವಾಮೀಜಿ ಬೆಂಬಲಮಹಾನಗರ ಪಾಲಿಕೆಯಲ್ಲಿ ಕನ್ನಪರ ಗೊತ್ತುವಳಿಯನ್ನು ಮಂಡಿಸುವಂತೆ ಒತ್ತಾಯಿಸಿ ನಡೆದಿರುವ ಹೋರಾಟಕ್ಕೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಗೊತ್ತುವಳಿ ಮಂಡಿಸುವುದಕ್ಕಾಗಿ ಹೋರಾಟ ಮಾಡುವ ಸ್ಥಿತಿ ಬಂದಿದೆ. ಇಷ್ಟೆಲ್ಲ ಆದರೂ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳದಿರುವುದು ದೊಡ್ಡ ದುರಂತ. ಬೆಳಗಾವಿ ನಮ್ಮ ಹಕ್ಕು. ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರೇ ಮೇಯರ್, ಉಪಮೇಯರ್ ಇದ್ದರೂ ಕನ್ನಡ ಗೊತ್ತುವಳಿ ಅಂಗೀಕರಿಸದಿರುವುದು ಯೋಗ್ಯವಲ್ಲ. ಬೆಳಗಾವಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಇದು ಎರಡನೇ ರಾಜಧಾನಿಯಾಗಿದೆ. ಪಾಲಿಕೆ ಕನ್ನಡ ಗೊತ್ತುವಳಿ ನಿರ್ಣಯವನ್ನು ಕೈಗೊಳ್ಳದಿದ್ದರೇ ಸ್ವಾಮೀಜಿಗಳೆಲ್ಲ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net