ರಾಣಿ ಚನ್ನಮ್ಮ ವಿವಿಯ ರಾಷ್ಟ್ರೀಯ ಸಮ್ಮೇಳನ ಆರಂಭ

 ಬೆಳಗಾವಿಯಲ್ಲಿ ಶುಕ್ರವಾರ ಜರುಗಿದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯಲ್ಲಿ ಪ್ರೊ.ರಾಜೀವ ಭಾರ್ಗವ, ಡಾ.ಸಾಬೀರ್ ಅಹ್ಮದ್ ಮುಲ್ಲಾ, ಪ್ರೊ.ಸಿ.ಎಂ.ತ್ಯಾಗರಾಜ, ಡಾ.ಜೆ.ಸೋಮಶೇಖರ, ಸಂತೋಷ ಕಾಮಗೌಡ ಇತರರಿದ್ದರು.
ಬೆಳಗಾವಿಯಲ್ಲಿ ಶುಕ್ರವಾರ ಜರುಗಿದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯಲ್ಲಿ ಪ್ರೊ.ರಾಜೀವ ಭಾರ್ಗವ, ಡಾ.ಸಾಬೀರ್ ಅಹ್ಮದ್ ಮುಲ್ಲಾ, ಪ್ರೊ.ಸಿ.ಎಂ.ತ್ಯಾಗರಾಜ, ಡಾ.ಜೆ.ಸೋಮಶೇಖರ, ಸಂತೋಷ ಕಾಮಗೌಡ ಇತರರಿದ್ದರು.
Published on
ಬೆಳಗಾವಿ: ಡಾ.ಬಿ.ಆರ್.ಅಂಬೇಡ್ಕರ್‌ರ ಒಳನೋಟಗಳು, ನೈತಿಕ ತತ್ವಗಳು ಮತ್ತು ದೃಷ್ಟಿಕೋನಗಳು ದೇಶದ ಸಾರ್ವಜನಿಕ ಜೀವನವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸದ್ದವು. ತಮ್ಮ ಸ್ಪಷ್ಟ ಚಿಂತನೆಯ ಮೂಲಕ ಶಿಕ್ಷಣವನ್ನು ಮುಖ್ಯವಾಹಿನಿಗೆ ತಂದು, ಸಾಮಾಜಿಕ ಪಿಡುಗಾದ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಜವಾಬ್ದಾರಿಯಿಂದ ಶ್ರಮಿಸಿದರು ಎಂದು ಖ್ಯಾತ ರಾಜ್ಯಶಾಸ್ತ್ರಜ್ಞ ಪ್ರೊ.ರಾಜೀವ ಭಾರ್ಗವ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ಸಮಾಜ ಕಾರ್ಯ ವಿಭಾಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಡಾ.ಬಿ.ಎಸ್.ಜಿರಗೆ ಸಭಾಭವನದಲ್ಲಿ ಶುಕ್ರವಾರ ಜರುಗಿದ ಎರಡು ದಿನಗಳ ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ:ಡಾ.ಬಿ.ಆರ್.ಅಂಬೇಡ್ಕರ್’ ಕುರಿತಾದ ರಾಷ್ಟ್ರೀಯ ಸಮ್ಮೇಳನ ದ ಉದ್ಘಾಟನಾ ಸಮಾರಂಭದ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್‌ರು ಎಂದಿಗೂ ಪ್ರತೀಕಾರ ತೀರಿಸಿಕೊಳ್ಳಲಿಲ್ಲ. ಬದಲಿಗೆ ನ್ಯಾಯದ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜಾತಿ ವ್ಯವಸ್ಥೆಯಲ್ಲಿ ತಾರತಮ್ಯ ಆಕಸ್ಮಿಕವಲ್ಲ, ಅದು ಒಂದು ನಿರ್ಮಿತ ವ್ಯವಸ್ಥೆ. ಈ ವ್ಯವಸ್ಥೆಯನ್ನು ಹೋಗಲಾಡಿಸಲು ಮತ್ತು ಸಮಾಜದ ಸುಸ್ಥಿರ ಯೋಗಕ್ಷೇಮವನ್ನು ಕಾಪಾಡಲು ನೈತಿಕ ತತ್ವಗಳೊಂದಿಗೆ ಬೆಸೆದ ರೂಢಿಗಳು ಅತ್ಯಗತ್ಯ ಎಂಬ ತತ್ವವನ್ನು ಅವರು ನಂಬಿದ್ದರು. ಪ್ರಸ್ತುತ ಯುವಸಮೂಹ ಯಾವುದೇ ತರಹದ ತಾರತಮ್ಯಕ್ಕೆ ಆಸ್ಪದ ನೀಡದೆ, ಸಕ್ರಿಯವಾದ ಜ್ಞಾನಾರ್ಜನೆಯಲ್ಲಿ ತೊಡಗಿಕೊಂಡು, ತಮ್ಮ ನೈತಿಕ ಕ್ಷಿತಿಜವನ್ನ ವಿಸ್ತರಿಸಿಕೊಳ್ಳಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಕಟ್ಟುನಿಟ್ಟಾಗಿ ತಮ್ಮ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ ಕೇಂದ್ರದ ನಿರ್ದೇಶಕ ಡಾ.ಸಾಬಿರ್ ಅಹ್ಮದ್ ಮುಲ್ಲಾ ಮಾತನಾಡಿ, ಉತ್ತರ ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಹೆಚ್ಚಿನ ಅನುದಾನವನ್ನು ನೀಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಉಪಯುಕ್ತವಾಗುವ ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಕೇಂದ್ರ ಕಾರ್ಯಪ್ರವೃತ್ತಿಯಾಗಿದೆ ಎಂದರು.
ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ, ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎನ್.ಪಾಟೀಲ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ, ಇತರರಿದ್ದರು.
ಡಾ.ಗಜಾನನ ನಾಯ್ಕ ನಿರೂಪಿಸಿದರು. ಡಾ.ಅಶ್ವಿನಿ ಜಾಮೂನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net