ಬೆಳಗಾವಿ: ಸಂಸತ್ತಿನ ನಿಯಮಾವಳಿಗಳ ಅರಿವಿಲ್ಲದಂತೆ ನಡೆದುಕೊಳ್ಳುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಪಕ್ವ ನಡವಳಿಕೆಯಿಂದ ಸ್ವತಃ ಕಾಂಗ್ರೆಸ್ಸಿಗರೇ ಬೇಸರಗೊಳ್ಳುವಂತಾಗಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ಲೇವಡಿ ಮಾಡಿದರು.
ನಗರದ ಕಾಡಾ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಈಚೆಗೆ ಯಶಸ್ವಿಯಾದ ಕೃತಕ ಬುದ್ಧಿಮತ್ತೆ(ಎಐ) ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿಸಿದೆ. ಪ್ರಧಾನಿ ಮೋದಿಯವರು ಅನೇಕ ರಾಷ್ಟ್ರಗಳೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಸಕಾರಾತ್ಮಕ ಬೆಳವಣಿಗೆ ಸಹಿಸಿಕೊಳ್ಳಲಾಗದ ರಾಹುಲ್ ಗಾಂಧಿ, ತಾವೇ ಹದಿನೈದು ಹುಡುಗರನ್ನು ಶೃಂಗಸಭೆಯೊಳಗೆ ಬಿಟ್ಟು ಗಲಾಟೆ ಮಾಡಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್‌ನ ಹೊಸ ಸಂಸದರು ಎಷ್ಟೋ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬೇಕಿದೆ. ಆದರೆ ವಿಷಯಾಧಾರಿತ ಚರ್ಚೆಯನ್ನು ಬಿಟ್ಟು ವಿನಾಕಾರಣ ವಿವಾದ ಸೃಷ್ಟಿಸುವುದನ್ನೆ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಸಂಸತ್ತಿನ ನಿಯಮಾವಳಿಗಳನ್ನೂ ಅನುಸರಿಸುತ್ತಿಲ್ಲ. ಇದು ಅವರದ್ದೇ ಪಕ್ಷದ ಸಂಸದರಿಗೂ ಬೇಸರ ತರಿಸಿದೆ. ನರೇಗಾ ತಿದ್ದುಪಡಿ ಬಗ್ಗೆ ಹೊರಗಡೆ ಸಾಕಷ್ಟು ಆರೋಪ ಮಾಡುವವರು, ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಯನ್ನೇ ಮಾಡಲಿಲ್ಲ ಎಂದರು.
ಬಾಗಲಕೋಟೆಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಪೂರ್ವಯೋಜಿತವಾಗಿ ಕಲ್ಲು ಎಸೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಹಿಂದೂ-ಮುಸ್ಲಿಂ ಕೋಮು ಗಲಭೆಗಳು ಹೆಚ್ಚಾಗುತ್ತವೆ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಸದ್ಯ ಈ ಪ್ರಕರಣದಲ್ಲಿ ಅಸಲಿ ಆರೋಪಿಗಳನ್ನು ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಬೆಳಗಾವಿ-ಧಾರವಾಡ ರೈಲು ಮಾರ್ಗ ಕಾಮಗಾರಿಗೆ ಭೂಸ್ವಾಧೀನವೇ ದೊಡ್ಡ ಸಮಸ್ಯೆಯಾಗಿದೆ. ಧಾರವಾಡದಲ್ಲಿ ಸಂತೋಷ ಲಾಡ್ ಅಡತಡೆಯಿಂದ 60 ಎಕರೆ ಭೂಸ್ವಾಧೀನ ನಿಂತಿದೆ. ಭೂಸ್ವಾಧೀನಕ್ಕೂ ಕೊಡುವುದಕ್ಕೆ ಇವರಲ್ಲಿ ಹಣವಿಲ್ಲ. ಹೀಗಾಗಿ ರಾಜ್ಯದಲ್ಲಿ ಅನೇಕ ಯೋಜನೆಗಳು ನಿಂತು ಹೋಗಿವೆ. ಬೆಳಗಾವಿ-ಪುಣೆ-ಮುಂಬೈ ಹೈಸ್ಪೀಡ್ ಕಾರಿಡಾರ್‌ಗೆ ರೈಲ್ವೆ ಸಚಿವರಲ್ಲಿ ಬೇಡಿಕೆ ಇಟ್ಟಿದ್ದೇನೆ. ಕೆಲವು ದಿನಗಳಲ್ಲಿ ಘೋಷಣೆಯಾಗಲಿದೆ ಎಂದು ತಿಳಿಸಿದರು.
ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಷ ಪಾಟೀಲ, ನಗರ ಅಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಸದಸ್ಯ ಹನಮಂತ ಕೊಂಗಾಲಿ, ಸಂತೋಷ ದೇಶನೂರ ಸುದ್ದಿಗೋಷ್ಠಿಯಲ್ಲಿದ್ದರು.
ಶೀಘ್ರ ಮನೆ ನಿರ್ಮಾಣ ಆರಂಭಪೂರ್ಣ ಪ್ರಮಾಣದಲ್ಲಿ ನಾನು ಬೆಳಗಾವಿ ಜನತೆಗೆ ಸಿಗುವುದಕ್ಕಾಗಿ ಇಲ್ಲಿಯೇ ಮನೆ ಮಾಡುವುದಾಗಿ ಹಿಂದೇ ಹೇಳಿದ್ದೆ. ಈಗ ಸೈಟ್ ತೆಗೆದುಕೊಂಡಿದ್ದೇವೆ. ಶೀಘ್ರವೇ ಮನೆ ನಿರ್ಮಾಣವನ್ನೂ ಆರಂಭಿಸುತ್ತೇವೆ ಎಂದು ಶೆಟ್ಟರ ಹೇಳಿದರು.