ಹಿಂಡಲಗಾ ಕಾರಾಗೃಹ ಎದುರು ಸಾವರಕರ ಭಾವಚಿತ್ರವಿಟ್ಟು ಪ್ರತಿಭಟನೆ

 ಬೆಳಗಾವಿಯಲ್ಲಿ ಬುಧವಾರ ಪ್ರಮೋದ ಮುತಾಲಿಕ ಹಿಂಡಲಾ ಜೈಲಿನಲ್ಲಿ ಸಾವರಕರ ಭಾವಚಿತ್ರ ಅಳವಡಿಸಿದ್ದ ಫೋಟೋ ದಾಖಲೆಗಳನ್ನು ಪ್ರದರ್ಶಿಸಿದರು.
ಬೆಳಗಾವಿಯಲ್ಲಿ ಬುಧವಾರ ಪ್ರಮೋದ ಮುತಾಲಿಕ ಹಿಂಡಲಾ ಜೈಲಿನಲ್ಲಿ ಸಾವರಕರ ಭಾವಚಿತ್ರ ಅಳವಡಿಸಿದ್ದ ಫೋಟೋ ದಾಖಲೆಗಳನ್ನು ಪ್ರದರ್ಶಿಸಿದರು.
Published on
ಬೆಳಗಾವಿ : ವೀರ ಸಾವರಕರ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮೂರು ತಿಂಗಳು ಜೈಲುವಾಸ ಅನುಭವಿಸಿದ್ದ ಐತಿಹಾಸಿಕ ಹಿನ್ನೆಲೆಯ ಸ್ಮರಣೆಗಾಗಿ ಜೈಲಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಳವಡಿಸಿದ್ದ ಫೋಟೋ ಮತ್ತಿತರೆ ದಾಖಲೆಗಳನ್ನು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ತೆಗೆದು ಹಾಕಿದ್ದಾರೆ. ಇದನ್ನು ಖಂಡಿಸಿ ಜು.13ರಂದು ಇದೇ ಕಾರಾಗೃಹದ ಎದುರು ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1950ರ ಜು.13ರಂದು ವೀರ ಸಾವರಕರ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದರು. ಅದೇ ದಿನ ನಾವು ಜೈಲಿನ ಎದುರು ಅವರ ಫೋಟೋ ಇಟ್ಟು ಪೂಜೆ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತೇವೆ. ಬಿಜೆಪಿ ಮುಖಂಡ ರವಿಕುಮಾರ ಸೇರಿದಂತೆ ವಿಎಚ್‌ಪಿ ಹಾಗೂ ಆರ್‌ಎಸ್‌ಎಸ್‌ನ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲೂ ಸಾವರಕರ ಅಭಿಮಾನಿಗಳು ಅವತ್ತೇ ಪ್ರತಿಭಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ನೆಹರು ಸರ್ಕಾರದ ಅವಧಿಯಲ್ಲಿ ಅಂದಿನ ಪಾಕಿಸ್ತಾನ ಅಧ್ಯಕ್ಷ ಭಾರತಕ್ಕೆ ಮಾತುಕತೆಗೆ ಬರುತ್ತಿರುವಾಗ ಸಾವರಕರರನ್ನು ಮುಂಬೈನಲ್ಲಿ ಬಂಧಿಸಿ, ಹಿಂಡಲಗಾ ಕಾರಾಗೃಹದಲ್ಲಿ ಮೂರು ತಿಂಗಳು ಇರಿಸಿದ್ದರು. ಇಂತಹ ಒಂದು ಇತಿಹಾಸವನ್ನು ದಾಖಲೆಯನ್ನಾಗಿ ಕಾಪಿಟ್ಟುಕೊಳ್ಳಲು ಬಿಜೆಪಿ ಅವಧಿಯಲ್ಲಿ ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಖುದ್ದು ಜೈಲಿಗೆ ಆಗಮಿಸಿ ಭಾವಚಿತ್ರ ಅಳವಡಿಸಿದ್ದರು. ಆದರೆ ಈಗ ಕಾಂಗ್ರೆಸ ಸರ್ಕಾರ ಭಾವಚಿತ್ರವನ್ನು ತೆರೆವು ಮಾಡಿಸಿದೆ. ಈ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ನೂರು ಜನ ಸಾವರಕರ ಅಭಿಮಾನಿಗಳ ನಿಯೋಗದ ಮೂಲಕ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನೂ ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದರು.
ಹಿಂಡಲಗಾ ಕಾರಾಗೃಹದಲ್ಲಿ ಸಾವರಕರ ತಂಗಿದ್ದ ಬ್ಯಾರಕ್‌ನಲ್ಲಿ ಭಾವಚಿತ್ರ, ಜೈಲಿನ ಆವರಣದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಬೇಕು. ಜೈಲಿನಲ್ಲೇ ಸಾವರಕರ ಜಯಂತಿ ಮತ್ತು ಪುಣ್ಯತಿಥಿ ನಡೆಯಬೇಕು. ಬೆಳಗಾವಿಯ ಬಸ್, ರೈಲ್ವೆ ಹಾಗೂ ವಿಮಾನ ನಿಲ್ದಾಣದಲ್ಲಿ ಸಾವರಕರ ಜೈಲು ವಾಸದ ಇತಿಹಾಸ ಪರಿಚಯಿಸುವ ಮಾಹಿತಿ ಫಲಕ ಹಾಕಬೇಕು. ರಾಜ್ಯದ ಶಾಲಾ ಅಥವಾ ಕಾಲೇಜು ಪಠ್ಯದಲ್ಲಿ ಜೈಲುವಾಸದ ಪಾಠ ಸೇರಿಸಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಯ ಸ್ಮರಣಾರ್ಥ ಜೈಲಿನ ಆ ಬ್ಯಾರಕ್‌ನ್ನು ಸ್ಮಾರಕವಾಗಿ ಕಾಯ್ದಿರಿಸಬೇಕು ಎಂದು ಮುತಾಲಿಕ ಆಗ್ರಹಿಸಿದರು.
ಸೋನಾಲಿ ಸರ್ನೋಬತ್, ವೆಂಕಟೇಶ ಶಿಂದೆ, ವಿನಯ ಅಂಗ್ರೊಳ್ಳಿ, ಬಾಳು ಪವಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net