ಒಳಚರಂಡಿ ಅವ್ಯವಸ್ಥೆಯಿಂದ ರೋಸಿ ಹೋದ ಜನ

ಬೆಳಗಾವಿ ನೆಹರೂ ನಗರದ ಬುರುಡ ಕಾಲನಿಯಲ್ಲಿ ಉದ್ಭವಿಸಿರುವ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯರು ಸೋಮವಾರ ಪ್ರತಿಭಟಿಸಿದರು.
ಬೆಳಗಾವಿ ನೆಹರೂ ನಗರದ ಬುರುಡ ಕಾಲನಿಯಲ್ಲಿ ಉದ್ಭವಿಸಿರುವ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯರು ಸೋಮವಾರ ಪ್ರತಿಭಟಿಸಿದರು.
Published on
ಬೆಳಗಾವಿ: ಮನೆಯೊಳಗೆ ನುಗ್ಗುತ್ತಿರುವ ಒಳಚರಂಡಿ ಕೊಳಚೆ ನೀರಿನಿಂದ ರೋಸಿ ಹೊದ ಇಲ್ಲಿನ ನೆಹರೂ ನಗರ ಬುರುಡ ಕಾಲನಿ ನಿವಾಸಿಗಳು ಸೋಮವಾರ ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಹೊರಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಈ ಪ್ರದೇಶದಲ್ಲಿ ಉದ್ಭವಿಸಿರುವ ಒಳಚರಂಡಿ ಅವ್ಯವಸ್ಥೆಯ ಬಗ್ಗೆ ವಿಜಯವಾಣಿಯಲ್ಲಿ ಎರಡು ದಿನಗಳ ಹಿಂದೆ ವಿಶೇಷ ವರದಿ ಸಹ ಪ್ರಕಟಗೊಂಡಿತ್ತು. ವರದಿ ಬೆನ್ನಲ್ಲಿಯೇ ಸೋಮವಾರ ಇಲ್ಲಿನ ನಿವಾಸಿಗಳು ಅಂಗವಿಕಲರಾದಿಯಾಗಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿ, ತಮ್ಮ ಮನೆಗಳಿಗೆ ಕೊಳಚೆ ನೀರು ನುಗ್ಗಿರುವ ಫೋಟೋಗಳನ್ನೇ ಫಲಕಗಳನ್ನಾಗಿ ಪ್ರದರ್ಶಿಸುತ್ತ ಜಿಲ್ಲಾಧಿಕಾರಿ ಕಚೇರಿಗೆ ರ‌್ಯಾಲಿಯಲ್ಲಿ ತೆರಳಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ನೆಹರೂ ನಗರ ವ್ಯಾಪ್ತಿಯ ಸರ್ವೇ ನಂ. 1358ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಹುಡ್ಕೋ ಯೋಜನೆಯಡಿ ಕೊಳಚೆ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸಿ 1989 ರಲ್ಲಿ ಹಂಚಿಕೆ ಮಾಡಿದ್ದಾರೆ. ಆಗ ನಿರ್ಮಿಸಿದ ಗಟಾರು, ಒಳಚರಂಡಿ, ಒಳರಸ್ತೆಗಳೆಲ್ಲ ಹಾಳಾಗಿ ಹೋಗಿದ್ದು, ಒಮ್ಮೆಯೂ ದುರಸ್ತಿ ಮಾಡಿಲ್ಲ. ಈಗ ಒಳಚರಂಡಿಯ ನೀರು ಸರಾಗವಾಗಿ ಹರಿದು ಹೋಗದೇ ಮನೆಗಳೊಳಗೆ ಬರುತ್ತಿದೆ. ಇಂತಹ ನೀರಲ್ಲಿ ನಿಂತು ಅಡುಗೆ ಮಾಡುವ ಪರಿಸ್ಥಿತಿ ಇದೆ. ಮಲಗಿಕೊಳ್ಳಲು ಜಾಗವಿಲ್ಲದಂತಾಗಿದೆ. ಶೌಚಾಲಯಗಳ ಮೂಲಕವೇ ಗಲೀಜು ನೀರು ಬರುತ್ತಿದ್ದು, ನಿತ್ಯಕರ್ಮ ಮಾಡುವುದು ದುಸ್ತರವಾಗಿದೆ. ಅಂಗವಿಕಲರು, ವಯೋವೃದ್ದರು ತೀರಾ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಸಮಸ್ಯೆಯ ಆರಂಭದ ಹಂತದಲ್ಲೇ ಸ್ಲಂ ಬೋರ್ಡ್‌ಗೆ ಮನವಿ ಸಲ್ಲಿಸಿದಾಗ, ಈ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಒಪ್ಪಿಸಿದ್ದೇವೆ ಎಂದು ಹೇಳಿದ್ದರು. ಆದರೆ ಈವರೆಗೂ ಪಾಲಿಕೆ ಇತ್ತ ಕಡೆ ಗಮನಹರಿಸಿಲ್ಲ. ಸಾಕಷ್ಟು ಸಲ ಪಾಲಿಕೆಗೆ ಹಾಗೂ ಸ್ಥಳೀಯ ನಗರ ಸೇವಕರಿಗೂ ಮನವಿ ಮಾಡಿಕೊಂಡಿದ್ದೇವೆ. ಈಗ ಈ ಭಾಗದಲ್ಲಿ ಜನವಸತಿ ಹೆಚ್ಚಾಗಿದ್ದು, ಮೇಲ್ಭಾಗದ ಕೊಳಚೆ ನೀರೆಲ್ಲವೂ ಮುಂದೆ ಹರಿದು ಹೋಗದೇ ನಮ್ಮ ಮನೆಗಳನ್ನು ಆವರಿಸಿಕೊಳ್ಳುತ್ತಿದೆ. ಜೀವನ ನಡೆಸುವುದೇ ಕಷ್ಟವಾಗಿದ್ದು, ಬೇರೆ ಕಡೆ ಬಾಡಿಗೆ ಮನೆ ಮಾಡಲು ಶಕ್ತರಿಲ್ಲ. ಈ ಸಮಸ್ಯೆಯಿಂದ ನಾವು ನಗರದಲ್ಲಿದ್ದೇವೋ ಅಥವಾ ಕಾಡಿನಲ್ಲೋ ಅನ್ನೋ ಭಾವನೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ನಮ್ಮ ಕಾಲನಿಯಲ್ಲಿ ಉದ್ಭವಿಸಿರುವ ಒಳಚರಂಡಿ ಸಮಸ್ಯೆಯನ್ನು ಶೀಘ್ರ ಪರಿಹರಿಸಿ, ಹೊಸದಾಗಿ ಒಳಚರಂಡಿ ಪೈಪ್‌ಲೈನ್ ಅಳವಡಿಸಬೇಕು. ಸೂಕ್ತ ಗಟಾರುಗಳ ನಿರ್ಮಾಣವಾಗಬೇಕು. ಶುದ್ಧ ಕ್ರಯ ಪತ್ರ ನೀಡಬೇಕು. ಸಮುದಾಯ ಭವನ, ಕಾಂಕ್ರಿಟ್ ರಸ್ತೆ, ಗ್ರಾಂಥಾಲಯ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ರಾಜು ನೇಸರಕರ, ಪ್ರಕಾಶ ನೇಸರಕರ, ಗುಂಡು ಕುಕಡೆ, ಮಾರುತಿ ಮೇದಾರ, ಸಂಜು ಮೇದಾರ, ಮೀನಾಕ್ಷಿ ಕಾಕತಿಕರ , ಅಶ್ವಿನಿ ವಾಘಮೋರೆ ಇತರರಿದ್ದರು.
---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net