ಹುಕ್ಕೇರಿ: ಸ್ಥಳೀಯ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶತಮಾನ ಪೂರೈಸಿದ್ದರೂ ಶುಚಿತ್ವ ಮತ್ತು ರೋಗಿಗಳಿಗೆ ಬಿಸಿನೀರಿನ ವ್ಯವಸ್ಥೆ ಜತೆ ವೈದ್ಯರ ಕೊರತೆ ಇದೆ. ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಹೇಳಿದರು.
ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ಗ್ರಾಮೀಣ ಪ್ರದೇಶದ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯ ಮೂಲ ಸಮಸ್ಯೆಗಳನ್ನು ವೈದ್ಯರು ಮತ್ತು ರೋಗಿಗಳು ತಿಳಿಸಿದ್ದಾರೆ. ಅವರ ಬೇಡಿಕೆಗೆ ಅನುಗುಣವಾಗಿ ಅಗತ್ಯ ಸಿಬ್ಬಂದಿ, ತಾಯಿ ಮತ್ತು ಮಗು ಆಸ್ಪತ್ರೆ, ವೈದ್ಯಕೀಯ ಉಪಕರಣಗಳ ಪೂರೈಕೆ, ರೋಗಿಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ತೀವ್ರ ನಿಗಾ ಘಟಕ, ಡಯಾಲಿಸಿಸ್ ಘಟಕ, ಔಷಧ ಸಂಗ್ರಹಗಳ ಕೊಠಡಿ, ಶೌಚಗೃಹ ಪರಿಶೀಲಿಸಿ, ಒಳಚರಂಡಿ ವ್ಯವಸ್ಥೆ ಕ್ರಿಯಾಯೋಜನೆ ಕೈಗೊಳ್ಳಬೇಕು. ಗುತ್ತಿಗೆ ಆಧಾರಿತ ಸಿಬ್ಬಂದಿ ವೇತನ, ಸೌಲಭ್ಯಗಳ ಮಾಹಿತಿ ಪಡೆದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎಸ್.ಪಲ್ಲೇದ, ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ಮುಖ್ಯ ವೈದ್ಯಾಧಿಕಾರಿ ಎಂ.ಎಂ.ನರಸನ್ನವರ, ಎಲುಬು-ಕೀಲು ತಜ್ಞ ಎಂ.ಸಿ.ವಿಜಾಪುರೆ, ಸೀರೋಗ ತಜ್ಞ ಈರಣ್ಣ ಕಳ್ಳಿ, ಶಸಚಿಕಿತ್ಸಕ ದೀಪಕ ಅಂಬಲಿ, ದಂತವೈದ್ಯ ವಿನೋದಕುಮಾರ ಇತರರಿದ್ದರು.