ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಬಲದಂಡೆ ಕಾಲುವೆಗೆ ಭಾನುವಾರ ಭೇಟಿ ನೀಡಿದ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಕರಂದ ಪೆಡ್ನೇಕರ, ಮಂಜುನಾಥ ಹೊಸಮನಿ, ಎ.ಎಸ್.ಕಾಖಂಡಕಿ ಇತರರಿದ್ದರು.
ಜಲಾಶಯಗಳಿಂದ ನೀರು ಬಿಡುವ ಮುನ್ನವೇ ಕಾಲುವೆಗಳ ಹೂಳೆತ್ತುವುದು ಹಾಗೂ ಜಂಗಲ್ ಕಟಿಂಗ್ ಕಾಮಗಾರಿ ಪೂರ್ಣಗೊಳಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನಿರ್ದೇಶನ ನೀಡಿದ್ದಾರೆ.
ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ವ್ಯಾಪ್ತಿಯ ಗೊಡಚಿನಮಲ್ಕಿ, ಗೊಡಗೇರಿ, ಮೇಲ್ಮಟ್ಟಿ ಭಾಗದ ಬಲದಂಡೆ ಕಾಲುವೆಗೆ ಭೇಟಿ ನೀಡಿ ನೀರಿನ ಹರಿವು, ನಿರ್ವಹಣಾ ಕಾರ್ಯ, ದುರಸ್ತಿ ಅಗತ್ಯವಿರುವ ಭಾಗ, ರೈತರಿಗೆ ನೀರು ಸಮರ್ಪಕವಾಗಿ ತಲುಪುವ ವ್ಯವಸ್ಥೆ ಪರಿಶೀಸಿದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯವಿರುವ ಸ್ಥಳಗಳಲ್ಲಿ ತ್ವರಿತವಾಗಿ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದರು.
ಕಾಲುವೆಯ ಕೊನೆಯ ಭಾಗದಲ್ಲಿರುವ ರೈತರ ಜಮೀನುಗಳಿಗೂ ನೀರು ತಲುಪಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈಗಾಗಲೇ ಮುಂಗಾರು ಮಳೆ ಕೊರತೆಯಿಂದ ಸಾಕಷ್ಟು ನಷ್ಟ ಅನುಭವಿಸಿರುವ ರೈತರು ಕಾಲುವೆ ನೀರನ್ನೇ ಅವಲಂಬಿಸಿ ಬಿತ್ತನೆ ಮಾಡಿದ್ದಾರೆ ಹೀಗಾಗಿ, ಅಧಿಕಾರಿಗಳು ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಹಿಡಕಲ್ ಡ್ಯಾಮ್ ಕೆಎನ್‌ಎನ್‌ಎಲ್ ಜಿಆರ್‌ಬಿಸಿಸಿಸಿ ವೃತ್ತದ ಅಧೀಕ್ಷಕ ಇಂಜಿನಿಯರ್ ಮಕರಂದ ಪೆಡ್ನೇಕರ, ಸಿಬಿಸಿ ಉಪವಿಭಾಗ ಸಂಖ್ಯೆ 1ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ ಹೊಸಮನಿ, ಗೋಕಾಕ ವಿಭಾಗ 3ರ ಕಾರ್ಯಪಾಲಕ ಇಂಜಿನಿಯರ್ ಎ.ಎಸ್.ಕಾಖಂಡಕಿ, ಉಪವಿಭಾಗ 6ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಶ್ವಿನ ಎಚ್.ಜೆ., ನಿಂಗಪ್ಪ ಕುರಬೇಟ, ಶಿವು ಪಾಟೀಲ, ಅಶೋಕ ಖಂಡ್ರಟ್ಟಿ, ಸುಧಾಕರ ಶೆಟ್ಟಿ, ಬಸವರಾಜ ಪಾಟೀಲ, ಶಿವು ಮುಗಲಿ ಇತರರಿದ್ದರು.