ಗಡಿಜಿಲ್ಲೆಯಲ್ಲಿ ಕೈ ರಾಜಕೀಯ ಚುರುಕು

ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ
ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ
Published on
ಡಿ.ವಿ.ಕಮ್ಮಾರ ಬೆಳಗಾವಿ
ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ನೇಮಕವಾಗುತ್ತಿರುವ ಬೆನ್ನಲ್ಲೇ ಬೆಳಗಾವಿಯ ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಿದ್ದಂತೆ ಜಿಲ್ಲೆಯಲ್ಲಿರುವ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳ ಬೆಂಬಲಿಗರು ಪೂಜೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಗೂ ಗಣ್ಯರ ಗಮನ ಸೆಳೆಯುವ ಪ್ರಯತ್ನಗಳ ಮೂಲಕ ತಮ್ಮ ನಾಯಕರ ಪರ ಪೈಪೋಟಿ ಆರಂಭಿಸಿದ್ದಾರೆ. 2023ರಲ್ಲಿ ಸರ್ಕಾರ ರಚನೆಯಾಗುವ ವೇಳೆ ಕೇಳಿ ಬಂದಿದ್ದ ನಾಲ್ಕು ಸಚಿವ ಸ್ಥಾನದ ಬೇಡಿಕೆ ಪುನಃ ಮುನ್ನೆಲೆಗೆ ಬಂದಿದೆ. 
ಸಿದ್ದರಾಮಯ್ಯ ಸಂಪುಟದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತೀಶ ಜಾರಕಿಹೊಳಿ ಅವಕಾಶ ಪಡೆದುಕೊಂಡಿದ್ದರು. ದೊಡ್ಡ ಜಿಲ್ಲೆಯಾಗಿರುವ ಕಾರಣಕ್ಕೆ ಹಾಗೂ ಹಿಂದಿನ ಬಿಜೆಪಿಯ ಎಲ್ಲ ಸಿಎಂಗಳ ಅವಧಿಯಲ್ಲಿ ಜಿಲ್ಲೆಗೆ ನಾಲ್ಕಕ್ಕಿಂತ ಹೆಚ್ಚು ಸಚಿವ ಸ್ಥಾನ ನೀಡಿದ್ದನ್ನು ಆಧಾರವಾಗಿಟ್ಟುಕೊಂಡು ನಾಲ್ಕು ಸ್ಥಾನದ ಬೇಡಿಕೆ ಇಡಲಾಗಿತ್ತು. ಆದರೆ, ಕೇವಲ ಎರಡು ಸ್ಥಾನ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್ ಮುಂದೆ ನೋಡೋಣ ಎಂಬ ಭರವಸೆ ನೀಡಿತ್ತು.
ಇನ್ನೆರಡು ಸಚಿವ ಸ್ಥಾನ ಕೊಡುವ ಬದಲಿಗೆ ಕಾಗವಾಡ ಶಾಸಕ ರಾಜು ಕಾಗೆಗೆ ವಾಕರಸಾ ಸಂಸ್ಥೆ ಅಧ್ಯಕ್ಷ ಸ್ಥಾನ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿಗೆ ರಾಜ್ಯ ಹಣಕಾಸು ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ, ಕೊನೆವರೆಗೂ ಕೌಜಲಗಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲೇ ಇಲ್ಲ. 
ಹೊಸ ಸಂಪುಟದಲ್ಲಿ ಮರು ಸೇರ್ಪಡೆಗೆ ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ಕಸರತ್ತು ನಡೆಸಿದ್ದರೆ, ಹೊಸ ಸೇರ್ಪಡೆಗೆ ಅಥಣಿ ಶಾಸಕ ಲಕ್ಷ್ಮಣ ಸವದಿ, ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ, ರಾಜು ಕಾಗೆ, ಮಹಾಂತೇಶ ಕೌಜಲಗಿ, ರಾಮದುರ್ಗದ ಅಶೋಕ ಪಟ್ಟಣ ತೀವ್ರ ಪೈಪೋಟಿ ನಡೆಸಿದ್ದಾರೆ. ಹೊಸಬರ ಕೋಟಾದಲ್ಲಿ ಸವದತ್ತಿಯ ವಿಶ್ವಾಸ ವೈದ್ಯ ಮತ್ತು ಚನ್ನಮ್ಮನ ಕಿತ್ತೂರಿನ ಬಾಬಾಸಾಹೇಬ ಪಾಟೀಲ ಕೂಡ ರೇಸ್‌ನಲ್ಲಿದ್ದಾರೆ.

ಜಿಲ್ಲೆಯ ಒಟ್ಟು 18 ವಿಧಾನಸಭಾ ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅದರಲ್ಲಿ ನಾಲ್ವರು ಹೊಸದಾಗಿ ಶಾಸಕರಾಗಿದ್ದಾರೆ. ಉಳಿದವರು ಎರಡಕ್ಕಿಂತ ಹೆಚ್ಚು ಸಲ ಶಾಸಕರಾದ ಅನುಭವ ಹೊಂದಿದ್ದಾರೆ. ಸಹಜವಾಗಿ ಇದು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆಗೆ ಸಚಿವ ಸ್ಥಾನಕ್ಕೂ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಒಬ್ಬರಿಗೆ ಒಂದೇ ಹುದ್ದೆ ಎನ್ನುವ ಸೂತ್ರವನ್ನು ಹೈಕಮಾಂಡ್ ಪಾಲಿಸಿದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಬ್ಬರಿಗೆ ಸಚಿವ ಸ್ಥಾನದ ಅವಕಾಶ ಸಿಗುವ ಸಾಧ್ಯತೆ ಇದೆ.
ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವುದರಿಂದ ಮರು ಸೇರ್ಪಡೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ಚರ್ಚೆ ಇದೆ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿನ ಏಕೈಕ ಮಹಿಳಾ ಮಂತ್ರಿಯಾಗಿ ಅವರು ಹೆಸರು ಮಾಡಿದ್ದಾರೆ. ಇದೆಲ್ಲದರ ಮಧ್ಯೆ, ಹೈಕಮಾಂಡ್ ಯಥಾಸ್ಥಿತಿ ಕಾಯ್ದುಕೊಂಡಲ್ಲಿ, ಭಿನ್ನಾಭಿಪ್ರಾಯಗಳು ಭುಗಿಲೇಳುವ ಸಾಧ್ಯತೆಗಳಿವೆ. ಈ ಹಿಂದೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ರಾಜು ಕಾಗೆ, ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅದನ್ನು ಶಮನ ಮಾಡಲು ವಾಕರಸಾ ಸಂಸ್ಥೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಹಿರಿಯ ರಾಜಕಾರಣಿ ಲಕ್ಷ್ಮಣ ಸವದಿ ಅಸಮಾಧಾನ ಸ್ಫೋಟಗೊಳ್ಳುವ ಮುನ್ನ ಶಮನಗೊಳಿಸುವ ಕಾರ್ಯತಂತ್ರವನ್ನು ಹೈಕಮಾಂಡ್ ಮಾಡಬೇಕಾಗುತ್ತದೆ. 
ಒಟ್ಟಾರೆ, ರಾಜ್ಯದ ಅತಿದೊಡ್ಡ ಜಿಲ್ಲೆ ಹಾಗೂ ರಾಜಕೀಯದ ಪ್ರಮುಖ ಶಕ್ತಿ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಗೆ ಸಚಿವ ಸ್ಥಾನ ಹಂಚಿಕೆ ಹೈಕಮಾಂಡ್‌ಗೆ ಸವಾಲಿನ ಕೆಲಸದ ಕುರಿತು ಚರ್ಚೆಯಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net