ಬೆಳಗಾವಿ : ಜನ ಸಮುದಾಯ ಮೊಬೈಲ್‌ಗೆ ಅಂಟಿಕೊಂಡಿರುವ ಇಂದಿನ ದಿನಗಳಲ್ಲಿ ಜನರನ್ನು ಅದರಿಂದ ಹೊರತಂದು ಜೀವನೋತ್ಸಾಹ ತುಂಬಬಲ್ಲ ನಾಟಕಗಳ ಅಗತ್ಯತೆ ಇದೆ. ಇದಕ್ಕೆ ಪೂರಕವಾಗಿ ಉತ್ತಮ ನಾಟಕಗಳನ್ನು ಜನರು ಪ್ರೋತ್ಸಾಹಿಸಬೇಕಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ ಹುಲಜಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆಯ ಕಲಾವಿದರು ಪ್ರಸ್ತುತಪಡಿಸಿದ ‘ಸೆಕೆಂಡ್ ಹ್ಯಾಂಡ್ ಸದಾಶಿವ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ರಮೇಶ ಜಂಗಲ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕಾಮಗಾರಕರ, ಉದ್ಯಮಿ ಪುಂಡಲೀಕ, ಡಾ.ರಾಮಕೃಷ್ಣ ಮರಾಠೆ, ಎಂ.ಕೆ.ಹೆಗಡೆ, ಶೈಲಜಾ ಭಿಂಗೆ, ಬಿ.ಎಸ್.ಗವಿಮಠ, ಕನ್ನಡಭವನದ ಕಾರ್ಯದರ್ಶಿ ಯ.ರು.ಪಾಟೀಲ, ಪ್ರಸಾದ ಪಂಡಿತ, ಶಶಿಧರ ಹೊಸಕೋಟೆ ಇತರರಿದ್ದರು.
ಎಂ.ಎಸ್.ನರಸಿಂಹಮೂರ್ತಿ ರಚನೆಯ ನಾಟಕವನ್ನು ಶರಣಗೌಡ ಪಾಟೀಲ ನಿರ್ದೇಶಿಸಿ, ಸಂಗೀತ, ರಂಗ ಮತ್ತು ಬೆಳಕಿನ ವಿನ್ಯಾಸವನ್ನೂ ನಿರ್ವಹಿಸಿದ್ದರು. ವಾಮನ ಮಳಗಿ, ಶಾಂತಾ ಆಚಾರ್ಯ, ಶಿರೀಶ ಜೋಶಿ, ವಿಶ್ವನಾಥ ದೇಸಾಯಿ, ಅನುಶ್ರೀ ರಘುವೀರ, ಶರಣಯ್ಯ ಮಠಪತಿ ಅಭಿನಯಿಸಿದರು. ಗುರುದತ್ತ ಪೆಡ್ನೆಕರ್ ನೆಳಲು-ಬೆಳಕಿನ ವಿನ್ಯಾಸ ನೀಡಿದರು. ಸುಮಾರು 50 ನಿಮಿಷ ಕಾಲಾವಧಿ ನಾಟಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು.