ಪೊಲೀಸ್ ಗೃಹ ಯೋಜನೆಯ ಸ್ಥಾಪನೆ ಹಿನ್ನೆಲೆ ಬಿಚ್ಚಿಟ್ಟ ಪರಮೇಶ್ವರ

  ಬೆಳಗಾವಿಯಲ್ಲಿ ಶುಕ್ರವಾರ ಸಚಿವ ಡಾ.ಜಿ.ಪರಮೇಶ್ವರ ಪೊಲೀಸ್ ಗೃಹ ಯೋಜನೆಯ ಫಲಾನುಭವಿ ಪೊಲೀಸ್ ಕುಟುಂಬಗಳಿಗೆ ಸಾಂಕೇತಿಕವಾಗಿ ಕೀ ವಿತರಿಸಿದರು.
ಬೆಳಗಾವಿಯಲ್ಲಿ ಶುಕ್ರವಾರ ಸಚಿವ ಡಾ.ಜಿ.ಪರಮೇಶ್ವರ ಪೊಲೀಸ್ ಗೃಹ ಯೋಜನೆಯ ಫಲಾನುಭವಿ ಪೊಲೀಸ್ ಕುಟುಂಬಗಳಿಗೆ ಸಾಂಕೇತಿಕವಾಗಿ ಕೀ ವಿತರಿಸಿದರು.
Published on
ಬೆಳಗಾವಿ : ರಾಜ್ಯದಲ್ಲಿ ಪೊಲೀಸ್ ಗೃಹ ಯೋಜನೆ ಆರಂಭಿಸಿ, ಅಪಾರ್ಟಮೆಂಟ್ ಮಾದರಿಯಲ್ಲಿ 2ಬಿಎಚ್‌ಕೆ ಮನೆ ಕಟ್ಟಿಕೊಡುತ್ತಿರುವ ಸರ್ಕಾರದ ನಿರ್ಧಾರದ ಹಿಂದೆ ಬೆಳಗಾವಿಯ ಸಿಎಆರ್ ಹಳೇ ಕ್ವಾರ್ಟರ್ಸ್‌ದಲ್ಲಿದ್ದ ಪೊಲೀಸ್ ಕುಟುಂಬವೊಂದರ ಅಳಲು ಕಾರಣ ಎಂದು ಗೃಹ ಸಚಿವ ಜಿ.ಪರಮೇಶ್ವರ ಸ್ಮರಿಸಿಕೊಂಡರು.
ನಗರದ ಸಿಟಿ ಲೈನ್‌ದಲ್ಲಿ ಶುಕ್ರವಾರ ನೂತನ ಪೊಲೀಸ್ ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಜಾಗದ ಪಕ್ಕದಲ್ಲೇ ಸಿಎಆರ್ ಕ್ವಾರ್ಟರ್ಸ್‌ಗಳಿದ್ದವು. ಒಂದೊಂದು ರೂಮ್‌ನಲ್ಲಿ ಪೊಲೀಸ್ ಕುಟುಂಬದವರು ವಾಸಿಸುತ್ತಿದ್ದರು. ಬೀಳುವ ಸ್ಥಿತಿಯಲ್ಲಿದ್ದವು.ನಾನೊಮ್ಮೆ ಭೇಟಿ ನೀಡಿದ್ದಾಗ, ಪೊಲೀಸರೊಬ್ಬರ ಪತ್ನಿ ತುಂಬಾ ನೋವು ತೋಡಿಕೊಂಡಿದ್ದರು. ಆ ಅಳಲು ಕೇಳಿ ಇದು ನಾಗರಿಕರ ಸಮಾಜದಲ್ಲಿ ಅಪಮಾನ ಎಂದು ಬೇಸರವಾಗಿತ್ತು. ಸರ್ಕಾರದಲ್ಲಿ ಇದಕ್ಕೆ ಏನಾದರೂ ಕಾಯಕಲ್ಪ ಮಾಡಬೇಕೆಂದು ನಿರ್ಧರಿಸಿದ್ದೆ, ಅದರ ಫಲವೇ ಪೊಲೀಸ್ ಗೃಹ ಯೋಜನೆ ಎಂದರು.
ಪೊಲೀಸ್ ಗೃಹ ಯೋಜನೆಗೆ ಕಳೆದ ಬಜೆಟ್‌ನಲ್ಲಿ 2,000 ಕೋಟಿ ರೂ. ಮೀಸಲಿಡಲಾಗಿದೆ. 1,200 ಕೋಟಿ ರೂ. ಹಣ ಖರ್ಚು ಮಾಡಿ ಪೊಲೀಸ್ ಗೃಹ ಮಂಡಳಿ ಮೂಲಕ ಈವರೆಗೆ ಶೇ.40ರಷ್ಟು ಸಿಬ್ಬಂದಿಗೆ ಅಪಾರ್ಟಮೆಂಟ್ ಮಾದರಿಯಲ್ಲಿ 2 ಬಿಎಚ್‌ಕೆ ಮನೆಗಳನ್ನು ತಲಾ 38 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಕೊಟ್ಟಿದ್ದೇವೆ. ಈ ಬಜೆಟ್ನಲ್ಲಿ ಮತ್ತೆ 350 ಕೋಟಿ ರೂ. ಕೊಟ್ಟಿದ್ದಾರೆ. ಪೊಲೀಸ್ ಸಿಬ್ಬಂದಿ ಕುಟುಂಬ ನೆಮ್ಮದಿಯಿಂದ ಇರುವುದಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ರಾಜ್ಯದಲ್ಲಿ ಈಗ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ಬಿಟ್ಟರೇ ಬೆಳಗಾವಿ ಎನ್ನುವಂತಾಗಿದೆ. ಬೆಂಗಳೂರು ನಂತರ ಹೆಚ್ಚಿನ ಸೌಲಭ್ಯಗಳನ್ನು ಬೆಳಗಾವಿಗೆ ನೀಡುತ್ತಿದ್ದೇವೆ. ಚಳಿಗಾಲದ ಅಧಿವೇಶನದ ಬಂದೋಬಸ್ತ್‌ಗೆ ಬರುವ ಪೊಲೀಸರ ವಸತಿಗೆ ಶಾಶ್ವತ ಬ್ಯಾರಕ್ ನಿರ್ಮಾಣಕ್ಕೆ ಕಳೆದ ಬಜೆಟ್‌ನಲ್ಲಿ 20 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಶೀಘ್ರದಲ್ಲೇ ಅದರ ಕೆಲಸ ಆರಂಭಿಸುತ್ತೇವೆ. ತೆರವುಗೊಂಡಿರುವ ಸಿಎಆರ್ ಕ್ವಾರ್ಟರ್ಸ್‌ಗಳಿದ್ದ ಜಾಗದಲ್ಲಿ ನೂರು ಕ್ವಾರ್ಟರ್ಸ್ ನಿರ್ಮಾಣಕ್ಕೆ ಈ ವರ್ಷವೇ ಮಂಜೂರಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಶಾಸಕರಾದ ಮಹಾಂತೇಶ ಕೌಜಲಗಿ, ಆಸೀಫ್ ಸೇಠ್, ವಾಕರಸಾ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನಮಣ್ಣನವರ, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ, ಉತ್ತರ ವಲಯ ಐಜಿಪಿ ಡಾ.ಚೇತನಸಿಂಗ್ ರಾಠೋರ, ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಜಿಪಂ ಸಿಇಒ ರಾಹುಲ ಶಿಂಧೆ, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಎಸ್ಪಿ ಕೆ.ರಾಮರಾಜನ, ಡಿಸಿಪಿ ನಾರಾಯಣ ಬರಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net