ರಾಮದುರ್ಗ: ಲಿಂಗಾಯತ ಪಂಚಮಸಾಲಿ ಸಮುದಾಯದ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತುರನೂರ ಸಮೀಪದ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ಜೂ.೨೮ರಂದು ಬೆಳಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಸಮುದಾಯದ ತಾಲೂಕು ಘಟಕದ ಅಧ್ಯಕ್ಷ ಸಿ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕಾಗಿ ಪ್ರೋತ್ಸಾಹಿಸಲು ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.೯೦ಕ್ಕಿಂತ ಅಽಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸತ್ಕರಿಸಲಾಗುತ್ತಿದೆ ಎಂದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಕೀಲ ಎಫ್.ಎಸ್.ಸಿದ್ದನಗೌಡ್ರ ಉಪನ್ಯಾಸ ನೀಡಲಿದ್ದಾರೆ. ಸಮುದಾಯದ ತಾಲೂಕಾಧ್ಯಕ್ಷ ಸಿ.ಬಿ.ಪಾಟೀಲ ಅಧ್ಯಕ್ಷತೆ ವಹಿಸುವರು. ಲಿಂಗಾಯತ ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ನಿಂಗಪ್ಪ ಪಿರೋಜಿ, ವೀರರಾಣಿ ಚನ್ನಮ್ಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಪಿ.ಎಫ್.ಪಾಟೀಲ ಸೇರಿದಂತೆ ಸಮುದಾಯದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.೯೦ಕ್ಕಿಂತ ಅಽಕ ಅಂಕ ಪಡೆದ ತಾಲೂಕಿನ ಪಂಚಮಸಾಲಿ ಅರ್ಹ ವಿದ್ಯಾರ್ಥಿಗಳು ಜೂ.೨೬ ಒಳಗೆ ಆಧಾರ ಕಾರ್ಡ್ ಹಾಗೂ ಅಂಕಪಟ್ಟಿ ದಾಖಲಾತಿ ಕಳುಹಿಸಬೇಕು. ಮಾಹಿತಿಗೆ ತಾಲೂಕು ಪಂಚಮಸಾಲಿ ಸಮುದಾಯದ ಮುಖಂಡರನ್ನು ಸಂಪರ್ಕಿಸಬಹುದು. ಜೂ.೨೬ರ ನಂತರ ದಾಖಲಾತಿ ನೀಡಿದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದರು.
ವೀರರಾಣಿ ಚನ್ನಮ್ಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಪಿ.ಎಫ್. ಪಾಟೀಲ, ವೈ.ಎಚ್. ಪಾಟೀಲ, ಬಿ.ಎಫ್. ಬಸಿಡೋಣಿ, ಉಮೇಶ ಕೊಳವಿ, ಮಂಜುನಾಥ ನವಲಗುಂದ, ನಿಂಗನಗೌಡ ಪಾಟೀಲ ಇತರರಿದ್ದರು.