ಶೂಭಾಗ್ಯ ಅನ್ಯ ರಾಜ್ಯಕ್ಕೆ ಗುತ್ತಿಗೆ ನೀಡಿದ್ದಕ್ಕೆ ಆಕ್ರೋಶ

ಸುದ್ದಿಗೋಷ್ಠಿಯಲ್ಲಿ ಡಾ.ಅನಿಲ ಸೌದಾಗರ ಮಾತನಾಡಿದರು. ಪ್ರೇಮಾ ಭಂಡಾರೆ, ಶಿವಾನಂದ ಸೌದಾಗರ, ಅನಂತ ಬ್ಯಾಕೋಡ, ಲತಾ ಮಾನೆ ಇತರರಿದ್ದರು.
ಸುದ್ದಿಗೋಷ್ಠಿಯಲ್ಲಿ ಡಾ.ಅನಿಲ ಸೌದಾಗರ ಮಾತನಾಡಿದರು. ಪ್ರೇಮಾ ಭಂಡಾರೆ, ಶಿವಾನಂದ ಸೌದಾಗರ, ಅನಂತ ಬ್ಯಾಕೋಡ, ಲತಾ ಮಾನೆ ಇತರರಿದ್ದರು.
Published on
ಬೆಳಗಾವಿ: ಪ್ರಸಕ್ತ ಶೈಕ್ಷಣಿಕ ವರ್ಷದ ಶೂ ಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ 36.56 ಲಕ್ಷ ವಿದ್ಯಾರ್ಥಿಗಳಿಗೆ ಶೂ ಪೂರೈಕೆಯನ್ನು 104 ಕೋಟಿ ರೂ.ಗೆ ದೆಹಲಿ ಮೂಲದ ಒಂದೇ ಕಂಪನಿಗೆ ಗುತ್ತಿಗೆ ನೀಡುವ ಮೂಲಕ ರಾಜ್ಯ ಸರ್ಕಾರ ಸ್ಥಳೀಯ ಬಡ ದಲಿತ ಚರ್ಮ ಕುಶಲಕರ್ಮಿಗಳು, ಪರಿಶಿಷ್ಟ ಹಾಗೂ ಮುಸ್ಲಿಂ ಸಮುದಾಯದ ಉದ್ಯಮಿಗಳಿಗೆ ಅನ್ಯಾಯ ಮಾಡಿದೆ ಎಂದು ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾಒಕ್ಕೂಟ ಅಧ್ಯಕ್ಷ ಡಾ.ಅನಿಲ ಸೌದಾಗರ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಆಯಾ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸ್ಥಳೀಯವಾಗಿ ಟೆಂಡರ್ ಕರೆಯುತ್ತಿದ್ದರು. ಕಳೆದ ಹತ್ತು ವರ್ಷಗಳಿಂದ ಮಕ್ಕಳಿಗೆ ಸಕಾಲದಲ್ಲೇ ಶೂ ಸಿಗುತ್ತಿದ್ದವು. ಆದರೆ, ಈ ಸಲ ರಾಜ್ಯಾದ್ಯಂತ ಒಂದೇ ಟೆಂಡರ್ ಮಾಡಿದ್ದಾರೆ. 500 ಕೋಟಿ ರೂ. ವಹಿವಾಟು ಹೊಂದಿರುವವರು 3 ಕೋಟಿ ರೂ. ಇಎಂಡಿ ಕಟ್ಟಿ ಟೆಂಡರ್‌ನಲ್ಲಿ ಪಾಲ್ಗೊಳ್ಳಬಹುದಾದ ಷರತ್ತು ಹಾಕಿದ್ದರು. ಈ ಮೂಲಕ ಸ್ಥಳೀಯ ಹಿಂದುಳಿದ ಸಮುದಾಯಗಳನ್ನು
ದೂರ ತಳ್ಳಿ ಅನ್ಯ ರಾಜ್ಯದವರಿಗೆ ಟೆಂಡರ್ ನೀಡುವ ಷಡ್ಯಂತ್ರ ಮಾಡಿದ್ದಾರೆ ಎಂದು ದೂರಿದರು.
ಟೆಂಡರ್ ಆಹ್ವಾನ ಮಾಡಿದಾಗ ವಿರೋಧಿಸಿ ಅಂದಿನ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ವಿರೋಧಿಸಿ ಮನವಿ ಸಲ್ಲಿಸಿದ್ದೆವು. ಅವರು ನಮ್ಮ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೇ 500 ಕೋಟಿ ರೂ. ವಹಿವಾಟಿನ ಷರತ್ತು ಅಳವಡಿಸುವ ಮೂಲಕ ದಲಿತರು, ಮುಖ್ಯವಾಗಿ ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ. ದೆಹಲಿಯಲ್ಲಿರುವ ಕಂಪನಿ ಈಗ ಶೂ ಕೊಡಬೇಕಾದರೆ ಶಿಕ್ಷಕರೇ ಮಕ್ಕಳ ಪಾದದಳತೆ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಆ ಬಳಿಕ ಹಳ್ಳಿ ಹಳ್ಳಿಗೆ ಯಾವ ರೀತಿಯಲ್ಲಿ ಒಂದೇ ಕಂಪನಿ ಪೂರೈಕೆ ಮಾಡುತ್ತದೆ ಎಂಬುದೇ ಈಗ ಪ್ರಶ್ನೆಯಾಗಿದೆ ಎಂದರು.
ಕಾರ್ಯದರ್ಶಿ ಪ್ರೇಮಾ ಭಂಡಾರೆ ಮಾತನಾಡಿ, ಈಗಾಗಲೇ ವಿರೋಧ ಪಕ್ಷದ ಪ್ರಮುಖರಿಗೂ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈಗ ಆಗಿರುವ ಟೆಂಡರ್ ಪ್ರಕ್ರಿಯೆ ರದ್ದುಪಡಿಸಲು ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಪತ್ರ ಬರೆದಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸ್ಪಂದಿಸುವರಾ? ಎಂದು ಸೋಮವಾರದವರೆಗೆ ಕಾದು ನೋಡುತ್ತೇವೆ. ಟೆಂಡರ್ ರದ್ದಾಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಶಿವಾನಂದ ಸೌದಾಗರ, ನರಪತ ರಾಜಪುರೋಹಿತ, ಅನಂತ ಬ್ಯಾಕೋಡ, ಲತಾ ಮಾನೆ, ಅಕ್ಬರ್ ಪಾಶ್ಚಾಪುರೆ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net