ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ

ಪೀರನವಾಡಿ ಗ್ರಾಮದಲ್ಲಿ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಘಟಕ ಸ್ಥಾಪಿಸದಂತೆ ಆಗ್ರಹಿಸಿ ಖಾದರವಾಡಿ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರಿಗೆ ಮನವಿ ಸಲ್ಲಿಸಿದರು.
ಪೀರನವಾಡಿ ಗ್ರಾಮದಲ್ಲಿ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಘಟಕ ಸ್ಥಾಪಿಸದಂತೆ ಆಗ್ರಹಿಸಿ ಖಾದರವಾಡಿ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರಿಗೆ ಮನವಿ ಸಲ್ಲಿಸಿದರು.
Published on
ಬೆಳಗಾವಿ: ತಾಲೂಕಿನ ಪೀರನವಾಡಿ ಗ್ರಾಮದ ಸರ್ವೆ ನಂ. 222/1ರಲ್ಲಿ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಘಟಕ ಸ್ಥಾಪಿಸುತ್ತಿರುವುದನ್ನು ವಿರೋಧಿಸಿ ಖಾದರವಾಡಿ ಗ್ರಾಮಸ್ಥರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿದರು.
ರ‌್ಯಾಲಿ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿದ ಗ್ರಾಮಸ್ಥರು, ಪಪಂ ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಸುತ್ತಮುತ್ತಲಿನ ಯಾವುದೇ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಜನಸವತಿ ಹಾಗೂ ಶಾಲೆ ಇರುವ ಸ್ಥಳದಲ್ಲಿ ಕಸದ ಘಟಕ ಸ್ಥಾಪಿಸಲು ಮುಂದಾಗಿರುವುದು ಸರಿಯಲ್ಲ. ಇಲ್ಲಿರುವ ಎರಡು ಕೆರೆಗಳು ಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆಯಾಗಿದ್ದು, ಕಸ ಘಟಕ ಬಂದಲ್ಲಿ ನೀರು ಕಲುಷಿತಗೊಂಡು ಜಾನುವಾರುಗಳಿಗೆ ಕಂಟಕವಾಗುತ್ತದೆ. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ತ್ಯಾಜ್ಯ ಘಟಕ ಮಾಡಬಾರದು ಎಂದು ಆಗ್ರಹಿಸಿದರು.
ಈಗಾಗಲೇ ಈ ಜಾಗವನ್ನು ಮಕ್ಕಳು ಆಟದ ಮೈದಾನವಾಗಿ ಬಳಸುತ್ತಿದ್ದು, ಜಾನುವಾರುಗಳಿಗೆ ಮೇಯಲು ಇದೊಂದೆ ಗೋಮಾಳವಿದೆ. ಹಿಂದೂ ಮತ್ತು ಮುಸ್ಲಿಂ ಸ್ಮಶಾನಗಳಿವೆ. ಸಾರ್ವಜನಿಕರ ಓಡಾಡುವ ಸ್ಥಳದಲ್ಲಿ ಈ ಘಟಕ ಬೇಡ. ಬದಲಿಗೆ ಸ್ಮಶಾನಕ್ಕೆ ಹಾಗೂ ಆಟದ ಮೈದಾನಕ್ಕೆ ತಲಾ ಎರಡು ಎಕರೆ ಹಂಚಿಕೆ ಮಾಡಿ ಆದೇಶ ಹೊರಡಿಸಬೇಕು. ಇಲ್ಲಿದೇ ಹೋದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ರಾಕೇಶ ಪಾಟೀಲ, ರೋಹಣ ದೇಸಾಯಿ, ಪ್ರಭಾಕರ ಮಾಳ್ವಿ, ವಿಶಾಲ ಪಾಟೀಲ, ಆಕಾಶ ಪಾಟೀಲ, ಲಖನ ಪಿಂಗಟ, ಸುಲೋಚನಾ ನೇಸರಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net