ಯೋಗದಿಂದ ಮಾತ್ರ ರೋಗಗಳಿಂದ ರಕ್ಷಣೆ ಸಾಧ್ಯ

ಬೆಳಗಾವಿಯ ಬಿ.ಎಂ.ಕಂಕಣವಾಡಿ ಆಯುರ್ವೇದ ಆಸ್ಪತ್ರೆಯಲ್ಲಿ ಶನಿವಾರ ಜರುಗಿದ ಯೋಗಾಸನ ಸ್ಪರ್ಧೆಯ ವಿವಿಧ ವಿಭಾಗಗಳ ವಿಜೇತರೊಂದಿಗೆ ಡಾ.ಸುಹಾಸಕುಮಾರ ಶೆಟ್ಟಿ, ಡಾ.ಪಿ.ಜಿ.ಜಾಡರ, ಡಾ.ಬಸವರಾಜ ತುಬಾಕಿ, ಡಾ.ಸಂದೀಪ ಸಗರೆ, ಡಾ.ಸಂಜೀವ ಟೊನ್ನಿ, ರಶ್ಮಿ ಚವಾಣ, ಕಿಶನ ಥೋರಟ್ ಇತರರಿದ್ದರು.
ಬೆಳಗಾವಿಯ ಬಿ.ಎಂ.ಕಂಕಣವಾಡಿ ಆಯುರ್ವೇದ ಆಸ್ಪತ್ರೆಯಲ್ಲಿ ಶನಿವಾರ ಜರುಗಿದ ಯೋಗಾಸನ ಸ್ಪರ್ಧೆಯ ವಿವಿಧ ವಿಭಾಗಗಳ ವಿಜೇತರೊಂದಿಗೆ ಡಾ.ಸುಹಾಸಕುಮಾರ ಶೆಟ್ಟಿ, ಡಾ.ಪಿ.ಜಿ.ಜಾಡರ, ಡಾ.ಬಸವರಾಜ ತುಬಾಕಿ, ಡಾ.ಸಂದೀಪ ಸಗರೆ, ಡಾ.ಸಂಜೀವ ಟೊನ್ನಿ, ರಶ್ಮಿ ಚವಾಣ, ಕಿಶನ ಥೋರಟ್ ಇತರರಿದ್ದರು.
Published on
ಬೆಳಗಾವಿ : ಇವತ್ತು ಮಧುಮೇಹ, ಹೈಪರ್ ಟೆನ್ಸೆನ್, ಕ್ಯಾನ್ಸರ್ ಹಾಗೂ ವಿವಿಧ ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳಿಂದ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಂದು ಯೋಗ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಕೆಎಲ್‌ಇ ಸಂಸ್ಥೆಯಿಂದ ಸ್ಪರ್ಧೆಯಂತಹ ಚಟುವಟಿಕೆಗಳ ಮೂಲಕ ಹೆಚ್ಚೆಚ್ಚು ಜನರನ್ನು ಯೋಗದತ್ತ ಕರೆದುಕೊಂಡು ಬರುವ ಕಾರ್ಯ ಮಾಡಲಾಗುತ್ತಿದೆ ಎಂದು ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಹಾಸಕುಮಾರ ಶೆಟ್ಟಿ ಹೇಳಿದರು.
12ನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಶಹಾಪುರದಲ್ಲಿ ಕಾಹೇರನ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸ್ವಸ್ಥವೃತ್ತ ಮತ್ತು ಯೋಗ ವಿಭಾಗ, ಎನ್‌ಎಸ್‌ಎಸ್ ಘಟಕ 3, 23 ಮತ್ತು 24ರ ಸಹಯೋಗದಲ್ಲಿ ಶನಿವಾರ ಸಾರ್ವಜನಿಕರು ಹಾಗೂ ಸಂಸ್ಥೆಯ ಸಿಬ್ಬಂದಿಗಾಗಿ ಏರ್ಪಡಿಸಿದ್ದ ‘ಕೆಎಲ್‌ಇ ಮಯೂರ ಯೋಗಾಸನ ಸ್ಪರ್ಧೆ’ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕಾಲೇಜಿನಲ್ಲಿ 2012ರಿಂದ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಸ್ಪರ್ಧೆ ಹಾಗೂ ವಿವಿಧ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ಇದಕ್ಕೆ ಹೆಚ್ಚಿನ ಜನಬೆಂಬಲ ವ್ಯಕ್ತವಾಗುತ್ತಿದೆ. ಇವತ್ತು ನಡೆದ ಸ್ಪರ್ಧೆಯಲ್ಲಿ ಬೇರೆ ಬೇರೆ ಊರುಗಳ ಮಕ್ಕಳು, ಹಿರಿಯರು ಹಾಗೂ ಕೆಎಲ್‌ಇ ಸೊಸೈಟಿಯ ವಿವಿಧ ಅಂಗಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿ, ಬೋಧಕರು ಪಾಲ್ಗೊಂಡಿದ್ದರು. ಜೂ.21ರಂದು ಕಾಹೇರ ಆವರಣದಲ್ಲಿ ದೊಡ್ಡ ಮಟ್ಟದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಯೋಜಿಸಿದ್ದು, ವಿಜೇತ ರಿಗೆ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.

ಕಂಕಣವಾಡಿ ಆಯುರ್ವೇದ ಆಸ್ಪತ್ರೆಯಲ್ಲಿ ನಾವು 20 ವರ್ಷದಿಂದ ಯೋಗಕ್ಕಾಗಿ ಬರುತ್ತಿದ್ದೇವೆ. ಯೋಗದಿಂದ ತುಂಬಾ ಸಹಾಯವಿದೆ. ಪ್ರತಿ ರೋಗಕ್ಕೆ ಒಂದೊಂದು ಆಸನಗಳಿವೆ. ಅದು ಒಂದೇ ದಿನಕ್ಕೆ ಸಿದ್ಧಿಸುವುದಿಲ್ಲ. ನಿತ್ಯವೂ ಯೋಗ ಮಾಡಬೇಕು. ಈ ಮಹಾವಿದ್ಯಾಲಯದ ಯೋಗ ವಿಭಾಗದಲ್ಲಿ ಚೆನ್ನಾಗಿ ಕಲಿಸಿಕೊಡುತ್ತಿದ್ದಾರೆ. ಪ್ರತಿ ವರ್ಷವೂ ಸ್ಪರ್ಧೆಯಿಟ್ಟು, ಮತ್ತಷ್ಟು ಹುರಿದುಂಬಿಸುತ್ತಿದ್ದಾರೆ. ಯೋಗದಿಂದಲೇ ದೇಶವನ್ನು ನಾವು ರೋಗಮುಕ್ತ ಮಾಡುವ ಸಂಕಲ್ಪ ಮಾಡಬೇಕಿದೆ.

ಚೇತನಾ ತೇಲಸಂಗ, ಸ್ಪರ್ಧಿ


ಉಪಪ್ರಾಚಾರ್ಯ ಡಾ.ಪಿ.ಜಿ.ಜಾಡರ, ಡೀನ್ ಡಾ.ಬಸವರಾಜ ತುಬಾಕಿ, ಸ್ವಸ್ಥವೃತ್ತ ಯೋಗ ವಿಭಾಗದ ಮುಖ್ಯಸ್ಥ ಡಾ.ಸಂದೀಪ ಸಗರೆ, ಡಾ.ಸಂಜೀವ ಟೊನ್ನಿ, ರಶ್ಮಿ ಚವಾಣ, ಕಿಶನ ಥೋರಟ್ ಇತರರಿದ್ದರು.
ಬೆಳಗ್ಗೆಯಿಂದ ಸಂಜೆಯವೆಗೂ ಜರುಗಿದ ಸ್ಪರ್ಧೆಯಲ್ಲಿ 6ರಿಂದ 9, 10ರಿಂದ 14, 15ರಿಂದ 17, 18ರಿಂದ 25, 26ರಿಂದ 40 ಹಾಗೂ 40 ವರ್ಷ ಮೇಲ್ಮಟ್ಟ ವಯೋಮಾನದ ವಿಭಾಗಗಳಲ್ಲಿ 6ವರ್ಷದ ಪುಟ್ಟ ಮಕ್ಕಳಿಂದ ಹಿಡಿದು 70 ವರ್ಷದವರೆಗಿನ ಹಿರಿಯ ಯೋಗಪಟುಗಳು ಸಹ ಪಾಲ್ಗೊಂಡು 24 ವಿಧಗಳಲ್ಲಿ ಜರುಗಿದ ಸ್ಪರ್ಧೆಯಲ್ಲಿ ತಮ್ಮ ಯೋಗಾಶನ ಕೌಶಲ, ವಿವಿಧ ಆಸನಗಳ ಚಾಕಚಕ್ಯತೆ ಹಾಗೂ ಸಾಮರ್ಥ್ಯ ಪ್ರದರ್ಶಿಸಿದರು.
ಬೆಳಗಾವಿ, ಗೋಕಾಕ, ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಒಟ್ಟು 182 ಪಟುಗಳಿದ್ದರು. ವಿಶೇಷವಾಗಿ ರಿದಮಿಕ್ ಯೋಗದಲ್ಲಿ ಜೋಡಿ ಮತ್ತು ವೈಯಕ್ತಿಕ ವಿಭಾಗದ ಸ್ಪರ್ಧೆ ಗಮನ ಸೆಳೆಯಿತು. ಆಯಾ ವಿಭಾಗದಲ್ಲಿ ಪ್ರಥಮ, 1,500ರೂ, ದ್ವಿತೀಯ 1,000ರೂ ಹಾಗೂ ತೃತೀಯ 750ರೂ, ಬಹುಮಾನ ನೀಡಲಾಗುತ್ತಿದೆ. ಎಲ್ಲ ಸ್ಪರ್ಧಾಳುಗಳಿಗೂ ಪ್ರಮಾಣ ಪತ್ರ ನಿಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net