ಸಾಂಕ್ರಾಮಿಕ ರೋಗಗಳ ಪರಿಹಾರಕ್ಕೆ ಒನ್ ಹೆಲ್ತ್ ಸಹಕಾರಿ

 ಬೆಳಗಾವಿಯ ಎನ್‌ಐಟಿಎಂನಲ್ಲಿ ಶುಕ್ರವಾರ ಜರುಗಿದ ಒನ್ ಹೆಲ್ತ್ ಕುರಿತ ದಿಕ್ಸೂಚಿ ಕಾರ್ಯಕ್ರಮದಲ್ಲಿ ಡಾ.ನಿವೇದಿತಾ ಗುಪ್ತಾ, ಡಾ. ಸುಬರ್ಣ ರಾಯ್, ಡಾ.ಎ.ಪಿ.ಸುಗುಣನ್, ಡಾ. ಜ್ಯೋತಿ ಭಟ್ ಇತರರಿದ್ದಾರೆ.
ಬೆಳಗಾವಿಯ ಎನ್‌ಐಟಿಎಂನಲ್ಲಿ ಶುಕ್ರವಾರ ಜರುಗಿದ ಒನ್ ಹೆಲ್ತ್ ಕುರಿತ ದಿಕ್ಸೂಚಿ ಕಾರ್ಯಕ್ರಮದಲ್ಲಿ ಡಾ.ನಿವೇದಿತಾ ಗುಪ್ತಾ, ಡಾ. ಸುಬರ್ಣ ರಾಯ್, ಡಾ.ಎ.ಪಿ.ಸುಗುಣನ್, ಡಾ. ಜ್ಯೋತಿ ಭಟ್ ಇತರರಿದ್ದಾರೆ.
Published on
ಬೆಳಗಾವಿ: ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಹರಡುವಿಕೆ ಎದುರಿಸಲು ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯ ವ್ಯವಸ್ಥೆಗಳನ್ನು ಸದೃಢಗೊಳಿಸಲು ದೇಶಾದ್ಯಂತ ಒನ್ ಹೆಲ್ತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥೆ ಡಾ.ನಿವೇದಿತಾ ಗುಪ್ತಾ ಹೇಳಿದರು.
ನಗರದ ಐಸಿಎಂಆರ್-ರಾಷ್ಟ್ರೀಯ ಸಾಂಪ್ರದಾಯಿಕ ವೈದ್ಯಕೀಯ ಸಂಸ್ಥೆ(ಎನ್‌ಐಟಿಎಂ)ಯಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಒನ್ ಹೆಲ್ತ್ ಇಂಟಿಗ್ರೇಟೆಡ್ ಸರ್ವೆಲೆನ್ಸ್, ಔಟ್‌ಬ್ರೇಕ್ ರೆಸ್ಪಾನ್ಸ್ ಆ್ಯಂಡ್ ರಿಸರ್ಚ್’ ಕುರಿತ ಒಂದು ದಿನದ ದಿಕ್ಸೂಚಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹಕ್ಕಿ ಜ್ವರ, ಹಂದಿ ಜ್ವರ, ಕೋವಿಡ್-19 ಹಾಗೂ ನಿಫಾ ವೈರಲ್ ಕಾಯಿಲೆಗಳನ್ನು ಪರಿಹರಿಸುವಲ್ಲಿ ಒನ್ ಹೆಲ್ತ್ ಯೋಜನೆ ಸಹಕಾರಿಯಾಗಿದೆ. ಭವಿಷ್ಯದ ಎಲ್ಲ ಸಾಂಕ್ರಾಮಿಕ ರೋಗಗಳಿಗೂ ಈ ವಿಧಾನವೇ ಮಹತ್ವ ಪಡೆದುಕೊಳ್ಳಲಿದೆ ಎಂದರು.
ಎನ್‌ಐಟಿಎಂ ನಿರ್ದೇಶಕ ಡಾ. ಸುಬರ್ಣ ರಾಯ್ ಮಾತನಾಡಿ, ಮಾನವ, ಪ್ರಾಣಿ, ಸಸ್ಯ ಮತ್ತು ಪರಿಸರ ಆರೋಗ್ಯ ಪರಸ್ಪರ ಅವಲಂಬಿತವಾಗಿವೆ. ಹಾಗಾಗಿ ಆಹಾರ ಸುರಕ್ಷತೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು ಎದುರಿಸಲು ಪ್ರತಿಯೊಬ್ಬರು ಸದೃಢವಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಡಮಾನ ಜ್ವರ, ಪೂರ್ವ ಉತ್ತರ ಪ್ರದೇಶದ ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್, ಕರ್ನಾಟಕದ ಕ್ಯಾಸನೂರು ಫಾರೆಸ್ಟ್ ಡಿಸೀಸ್‌ಗಳ ಬಗ್ಗೆ ಚರ್ಚಿಸಲಾಯಿತು.
ಫೋರ್ಟ್ ಬ್ಲೈರ್‌ನ ಆರ್‌ಎಂಆರ್‌ಸಿ ಮಾಜಿ ನಿರ್ದೇಶಕ ಪ್ರೊ.ಎಸ್.ಸಿ.ಸೆಹಗಲ್, ಕೇರಳ ಎನ್‌ಐವಿ ಘಟಕದ ಮಾಜಿ ಅಧಿಕಾರಿ ಡಾ.ಎ.ಪಿ.ಸುಗುಣನ್, ಚೆನ್ನೈನ ಎನ್‌ಐಇ ನಿರ್ದೇಶಕ ಡಾ.ಮನೋಜ ಮುರ್ಹೇಕರ, ಗೋವಾದ ಸಾಂಕ್ರಾಮಿಕ ರೋಗ ತಜ್ಞ ಡಾ. ಉತ್ಕರ್ಷ ಬಿ, ಡಾ.ಕಮ್ರಾನ ಜಮಾನ, ಡಾ. ಜ್ಯೋತಿ ಭಟ, ಡಾ. ಮಂಜುನಾಥಾಚಾರ ಇತರರಿದ್ದರು.
ವಿವಿಧ ರಾಜ್ಯದ ಇಲಾಖೆಗಳು ಮತ್ತು ವೈದ್ಯಕೀಯ ಸಂಸ್ಥೆಗಳ 60ಕ್ಕೂ ಹೆಚ್ಚು ಸರ್ವೆಲೆನ್ಸ್ ಅಧಿಕಾರಿಗಳು, ಸಾಂಕ್ರಾಮಿಕ ರೋಗ ತಜ್ಞರು, ಪಶುವೈದ್ಯರು, ಕೃಷಿ ವಿಜ್ಞಾನಿಗಳು ಮತ್ತು ಸಂಶೋಧಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net