ರಾಜ್ಯದಲ್ಲಿ ದುಡಿದರೂ ಸಿಗದ ನರೇಗಾ ಕೂಲಿ!

ಬೆಳಗಾವಿ ಜಿಲ್ಲೆಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ದುಡಿಯುತ್ತಿರುವ ಕಾರ್ಮಿಕರು
ಬೆಳಗಾವಿ ಜಿಲ್ಲೆಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ದುಡಿಯುತ್ತಿರುವ ಕಾರ್ಮಿಕರು
Published on
ಬೆಳಗಾವಿ:ರಾಜ್ಯಾದ್ಯಂತ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜಯಡಿ ದುಡಿದ ಕಾರ್ಮಿಕರು ಎರಡು ತಿಂಗಳಿನಿಂದ ಕೂಲಿ ಹಣ ಸಿಗದೆ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ! ಮತ್ತೊಂದೆಡೆ ನರೇಗಾದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾಮಗ್ರಿ ಪೂರೈಕೆ ಮಾಡಿರುವ ಗುತ್ತಿಗೆದಾರರು, ಅಂಗಡಿಕಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಹೌದು.ಕೇಂದ್ರ ಮತ್ತು ರಾಜ್ಯ ಸರ್ಕಾರ ಹಳ್ಳಿಗಳಲ್ಲಿನ ಜನರಿಗೆ ವರ್ಷಪೂರ್ತಿ ಉದ್ಯೋಗ ಕಲ್ಪಿಸಲು, ನಗರ ಪ್ರದೇಶಕ್ಕೆ ಗುಳೆ ಹೋಗುವುದನ್ನು ತಡೆಗಟ್ಟಲು ಹಾಗೂ ಕೂಲಿಕಾರ ಕನಿಷ್ಠ ಆದಾಯ ವೃದ್ಧಿಗಾಗಿ ನರೇಗಾ ಯೋಜನೆ ಜಾರಿಗೊಳಿಸಿದೆ. ಆದರೆ, ಈ ಯೋಜನೆ ಅಡಿಯಲ್ಲಿ ದುಡಿದ ಅಂದಾಜು 3.20 ಲಕ್ಷ ಕಾರ್ಮಿಕರಿಗೆ 77.50 ಕೋಟಿ ರೂ. ಕೂಲಿ ಬಾಕಿ ಉಳಿದುಕೊಂಡಿದೆ. ಇತ್ತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂರೈಕೆಯಾದ ಸಾಮಗ್ರಿಗಳಿಗೆ 590 ಕೋಟಿ ರೂ. ಭರಿಸಬೇಕಾಗಿದೆ. ಇದರಿಂದಾಗಿ ರಾಜ್ಯದಲ್ಲಿ ನರೇಗಾ ಕಾಮಗಾರಿಯ ಮೇಲೆ ಪರಿಣಾಮ ಬೀರಿದೆ.
ರಾಜ್ಯದ 5894 ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕಾರ್ಮಿಕರು 81.29ಲಕ್ಷ ಜಾಬ್ ಕಾರ್ಡ್‌ಗಳನ್ನು ಹೊಂದಿದ್ದು,7.11 ಕೋಟಿ ಮಾನವ ದಿನಗಳು ಸೃಷ್ಟಿ ಮಾಡಿ ಕಾರ್ಮಿಕರಿಗೆ, ರೈತರಿಗೆ ಉದ್ಯೋಗ ಕಲ್ಪಿಸಲಾಗಿದೆ. ಆದರೆ, 2025 ನವಂಬರ್ 25ರಿಂದ 2025 ಜನವರಿ 13ರವರೆಗೆ ದುಡಿದ ಕಾರ್ಮಿಕರಿಗೆ ವೇತನ ಪಾವತಿ ಆಗಿಲ್ಲ. ಕೆಲವು ಕಡೆ ದಾಖಲಾತಿ ಸಮಸ್ಯೆ ಇತರೆ ಕಾರಣಗಳಿಂದಾಗಿ ವರ್ಷದಿಂದ ಕೂಲಿ ಬಾಕಿ ಉಳಿದುಕೊಂಡಿದೆ.
ಸರ್ಕಾರವು ನಿಗದಿತ ಸಮಯದಲ್ಲಿ ಸಾಮಗ್ರಿ ಬಿಲ್ ಪಾವತಿ ಮಾಡದಿರುವ ಹಿನ್ನೆಲೆಯಲ್ಲಿ ನರೇಗಾ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಒಂದೂವರೆ ತಿಂಗಳ ಅವಧಿಯಲ್ಲಿ ಶೇ.60ರಷ್ಟು ಕಾರ್ಮಿಕರು ನರೇಗಾ ಕೆಲಸ ಬಿಟ್ಟು ಪರ್ಯಾಯ ಉದ್ಯೋಗದತ್ತ ಮುಖ ಮಾಡಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿನ ಕಾರ್ಮಿಕರು ಕಬ್ಬು ಕಟಾವು ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನೂ ಕಲಬುರ್ಗಿ, ಬೀದರ, ಕೊಪ್ಪಳ, ತುಮಕೂರು, ಕೋಲಾರ, ಬಳ್ಳಾರಿ ಜಿಲ್ಲೆಯ ಕಾರ್ಮಿಕರು ಹಿಂಗಾರು ಹಂಗಾಮಿನ ಬೆಳೆಗಳ ರಾಶಿ, ಕಾರ್ಖಾನೆ ಹಾಗೂ ಕೃಷಿ ಕೆಲಸಗಳಿಗೆ ಹೋಗುತ್ತಿದ್ದಾರೆ. ಹೀಗಾಗಿ ನರೇಗಾಕ್ಕೆ ಕಾರ್ಮಿಕರ ಬರ ಎದುರಾಗಿದೆ.
ಈಗಾಗಲೇ ನರೇಗಾ ಯೋಜನೆ ಅಡಿಯಲ್ಲಿ ಕೆರೆ ಹೂಳೆತ್ತುವುದು, ರಸ್ತೆ, ಚರಂಡಿ, ಚಿಕ್ಕ ಡ್ಯಾಂ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರರ ನರೇಗಾ ಕಾರ್ಮಿಗಾರಿಗೆ ಕೈಗೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಅರಣ್ಯ ಪ್ರದೇಶ ವಿಸ್ತರಣೆ, ನೀರು ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ಕಾಮಗಾರಿಗಳ ಜತೆಗೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬದು,ಶೆಡ್‌ಗಳ ನಿರ್ಮಾಣ, ಕೆರೆ ಮತ್ತು ನಾಲೆಗಳ ಹೂಳೆತ್ತುವಿಕೆ ಸೇರಿ ವಿವಿಧ ಅಭಿವೃದ್ಧಿ ಚಟುಟಿಕೆಗಳ ಪ್ರಗತಿ ಹಂತದಲ್ಲಿವೆ. ಆದರೆ, ಪೇಮಂಟ್ ಆಗದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ನರೇಗಾ ಯೋಜನೆ ಅಧಿಕಾರಿಗಳು ತಿಳಿಸಿದ್ದಾರೆ.
.........................
ಬಾಕ್ಸ್
593 ಕೋಟಿ ರೂ. ಬಾಕಿ
ನರೇಗಾ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡ ಶಾಲಾ ಕಾಂಪೌಂಡ್, ಚರಂಡಿ , ದನದ ಕೊಟ್ಟಿ, ಗ್ರಂಥಾಲಯ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ನವೀಕರಣ, ರಸ್ತೆಗಳ ನಿರ್ಮಾಣಕ್ಕೆ ಸಿಮೆಂಟ್, ಕಲ್ಲು, ಕಬ್ಬಿನ, ಮರಳು ಇನ್ನಿತರರ ಸಾಮಗ್ರಿಗಳು ಪೂರೈಸಲಾಗಿದೆ. ಆದರೆ, ಅನುದಾನ ಕೊರತೆ, ತಾಂತ್ರೀಕ ಸಮಸ್ಯೆಗಳಿಂದಾಗಿ ಸರ್ಕಾರವು 2025 ಸೆಪ್ಟಂಬರನಿಂದ ಬಾಕಿ ಉಳಿಸಿಕೊಂಡಿರುವ 593.74 ಕೋಟಿ ರೂ. ಸಾಮಗ್ರಿ ಬಿಲ್ ಬಿಡುಗಡೆ ಮಾಡಿಲ್ಲ. ಸರ್ಕಾರ ಸಮಯಕ್ಕೆ ಅನುದಾನ ಬಿಡುಗಡೆ ಮಾಡದಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನರೇಗಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕಾಮಗಾರಿ ವೆಚ್ಚ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ನರೇಗಾ ಇಂಜಿನಿಯರ್‌ಗಳು ತಿಳಿಸಿದ್ದಾರೆ.
.............................
ಬಾಕ್ಸ್
ನರೇಗ ಯೋಜನೆ ಸಮಗ್ರ ವಿವರ
ವಿಭಾಗ ಅಂಕಿ ಸಂಖ್ಯೆ
ಒಟ್ಟು ಮಾನವ ದಿನ ಗುರಿ 9 ಕೋಟಿ
ಒಟ್ಟು ಜಾಬ್ ಕಾರ್ಡ್‌ದಾರರು 81.09 ಲಕ್ಷ
ಒಟ್ಟು ನರೇಗಾ ಕಾರ್ಮಿಕರು 1.75 ಕೋಟಿ
ನರೇಗಾ ಕೂಲಿ ಬಾಕಿ 77.50 ಕೋಟಿ ರೂ.
ಸಾಮಗ್ರಿಗಳ ಬಿಲ್ ಬಾಕಿ 593.74 ಕೋಟಿ ರೂ.
...............................................
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net