ಕಳಪೆ ಮೊಟ್ಟೆ ನೀಡಿದ ಗುತ್ತಿಗೆದಾರರನಿಗೆ ನೋಟೀಸ್

ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರದಲ್ಲಿ ಕಳಪೆ ಮಟ್ಟದ ಮೊಟ್ಟೆ ಪೂರೈಕೆ
ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರದಲ್ಲಿ ಕಳಪೆ ಮಟ್ಟದ ಮೊಟ್ಟೆ ಪೂರೈಕೆ
Published on
ಬೆಳಗಾವಿ: ಮಹಾನಗರದಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರದಲ್ಲಿ ಕಳಪೆ ಮಟ್ಟದ ಮೊಟ್ಟೆ ಪೂರೈಕೆ ಮಾಡಿರುವ ಗುತ್ತಿಗೆದಾರರ ವಿರುದ್ಧ ದಂಡದ ಜತೆಗೆ ಶಿಸ್ತು ಕ್ರಮಕ್ಕೆ ಸ್ವಚ್ಛತಾ ಸಿಬ್ಬಂದಿ ಆಗ್ರಹಿಸಿದ್ದಾರೆ.
ಮಹಾನಗರ ಪಾಲಿಕೆಯ ವ್ಯಾಪ್ತಿಯ 58 ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,336 ಪೌರ ಕಾರ್ಮಿಕರಿಗೆ ಪ್ರತಿದಿನ ಬೆಳಗ್ಗೆ 23 ಸ್ಥಳಗಳಲ್ಲಿ ಬೆಳಗಿನ ಉಪಹಾರ ಮತ್ತು ಮೊಟ್ಟೆ ನೀಡಲಾಗುತ್ತಿದೆ. ಆದರೆ, ಶನಿವಾರ ಚೌವಾಟ್‌ಗಲ್ಲಿ ವ್ಯಾಪ್ತಿಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 69ಜನ ಪೌರ ಕಾರ್ಮಿಕರಿಗೆ ನೀಡಿದ್ದ ಬೆಳಗಿನ ಉಪಹಾರದಲ್ಲಿ ಮೊಟ್ಟ ಕೆಟ್ಟು ಹೋಗಿ ವಾಸನೆ ಬರುತ್ತಿತ್ತು. ತಕ್ಷಣವೇ ಕಾರ್ಮಿಕರು ಕೆಟ್ಟಿರುವ ಮೊಟ್ಟ ಕೊಟ್ಟಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಉಪಹಾರ ಸೇವಿಸದೆ ವಾಪಸ್ ಹೋಗಿದ್ದಾರೆ.
ಆಹಾರ ಪೂರೈಕೆಯ ಗುತ್ತಿಗೆದಾರರನು ಕಳೆದ ನಾಲ್ಕೈದು ವಾರಗಳಿಂದ ಬೆಳಗಿನ ಉಪಹಾರ ಸರಿಯಾಗಿ ನೀಡುತ್ತಿಲ್ಲ. ಕಳಪೆ ಮಟ್ಟದಿಂದ ಕೂಡಿರುವ ಸಾಂಬಾರ, ಚಟ್ನಿ, ಮೊಟ್ಟ ಇರುತ್ತದೆ. ಈ ಕುರಿತು ಪ್ರಶ್ನಿಸಿದರೆ ನಮ್ಮನ್ನೇ ಬೆದರಿಸಿ ಬಾಯಿ ಮುಚ್ಚಿಸುತ್ತಿದ್ದಾರೆ. ಹೀಗಾಗಿ ಉಪಹಾರ ನೀಡುವ ಬದಲು ಹಣ ಕೊಟ್ಟರೆ ನಾವು ಹೋಟೆಲ್‌ನಲ್ಲಿ ಬಿಸಿಯಾದ ಉಪಹಾರ ಸೇವನೆ ಮಾಡುತ್ತೇವೆ. ಈ ಕುರಿತು ಮಾ.16ರಂದು ಪಾಲಿಕೆ ಆಯುಕ್ತರಿಗೆ ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಕಾರ್ಮಿಕರು ದೂರಿದ್ದಾರೆ.
..................
ಬಾಕ್ಸ್
ಕಳಪೆ ಮೊಟ್ಟೆ ವಿತರಣೆ; ನೋಟೀಸ್ ಜಾರಿ
ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರದಲ್ಲಿ ಕಳಪೆ ಮಟ್ಟದ ಮೊಟ್ಟೆ ಪೂರೈಕೆ ಮಾಡಿರುವ ಗುತ್ತಿಗೆದಾರನಿಗೆ ಶಿಸ್ತು ಕ್ರಮದ ಕುರಿತು ನೋಟೀಸ್ ನೀಡಲಾಗುತ್ತಿದೆ. ಕಾರ್ಮಿಕರು ಗಮನಕ್ಕೆ ತಂದ ಕೂಡಲೇ ಖುದ್ದಾಗಿ ಭೇಟಿ ನೀಡಿದ ಸಂದರ್ಭದ ವೇಳೆ ಮೊಟ್ಟೆ ಕಳಪೆಯಾಗಿತ್ತು. ಹೀಗಾಗಿ ಈ ವಿಷಯದಲ್ಲಿ ಯಾರನ್ನು ಕ್ಷಮಿಸುವ ಮಾತೆಯೇ ಇಲ್ಲ. ಶನಿವಾರ ವಿತರಣೆ ಮಾಡಿರುವ ಮೊಟ್ಟೆ ಹಣ ಕಡಿತಗೊಳಿಸಲಾಗುವುದು. ಸೋಮವಾರ ಗುಣಮಟ್ಟದ ಮೊಟ್ಟೆಯ ಜತೆಗೆ ಸ್ವೀಟ್ ನೀಡಲು ಸೂಚಿಸಲಾಗಿದೆ ಎಂದು ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net