ಬೆಳಗಾವಿ:ಮಹಾನಗರ ಪಾಲಿಕೆ ಒಡೆತನದ ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಬಾಡಿಗೆದಾರರು ಆಸ್ತಿಗಳನ್ನು ಉಪಯೋಗಿಸಿ ಪಾಲಿಕೆ ಆರ್ಥಿಕ ನಷ್ಟವಾಗಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೇಯರ್ ಪ್ರೀತಿ ಕಾಮಕರ ಸೂಚಿಸಿದರು.
ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದ ವಿವಿಧ ಭಾಗಗಳಲ್ಲಿ ಪಾಲಿಕೆ ನೂರಾರು ಆಸ್ತಿಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.ಕೆಲ ಭಾಗದಲ್ಲಿ ಆಸ್ತಿಗಳ ದುರ್ಬಳಕೆ ಆಗುತ್ತಿದ್ದು, ಕಂದಾಯ ವಿಭಾಗದ ಅಧಿಕಾರಿಗಳು ಅಂತಹ ಆಸ್ತಿಗಳನ್ನು ಗುರುತಿಸಿ ವಶಪಡಿಸಿಕೊಳ್ಳಬೇಕು ಎಂದರು.
ಈಗಾಗಲೇ ಗುತ್ತಿಗೆ ಅವಧಿ ಮುಗಿದಿರುವ ಆಸ್ತಿಗಳನ್ನು ವಶಪಡಿಸಿಕೊಂಡು ಬಾಡಿಗೆ ದರ ನಿಗದಿ ಪಡಿಸಿ ಹೊಸದಾಗಿ ಗುತ್ತಿಗೆ ನೀಡುವಂತೆ ಸಭೆಯಲ್ಲಿ ಚರ್ಚಿಸಲಾಗಿತ್ತು.ಆದರೆ, ವರ್ಷಗಳಿಂದ ಗುತ್ತಿಗೆ ಮುಗಿದಿರುವ ಆಸ್ತಿಗಳ ವಶಪಡಿಸಿಕೊಳ್ಳಲು ಅಧಿಕಾರಿಗಳು ಕ್ರಮ ವಹಿಸಿಲ್ಲ. ಹೀಗಾಗಿಪಾಲಿಕೆ ಆಸ್ತಿಗಳು ದುರ್ಬಲಕೆ ಆಗುವುದರ ಜತೆಗೆ ಪಾಲಿಕೆ ವಾರ್ಷಿಕ ಲಕ್ಷಾಂತರ ರೂ. ಬಾಡಿಗೆ, ತೆರಿಗೆ ನಷ್ಟವಾಗುತ್ತಿದೆ. ಇದಕ್ಕೆಲ್ಲಾ ಜವಾಬ್ದಾರರು ಯಾರು ಎಂದು ತರಾಟೆಗೆ ತೆಗೆದುಕೊಂಡರು.
ಕೂಡಲೇ ಗುತ್ತಿಗೆ ಅವಧಿ ಮುಗಿದ ಆಸ್ತಿಗಳ ಮಾಲೀಕರಿಗೆ ನೋಟಿಸ ನೀಡಿ ಮುಗಿದ ಅವಧಿಯ ಬಾಡಿಗೆ ಮತ್ತು ದಂಡವನ್ನು ಪಡೆದುಕೊಳ್ಳಬೇಕು. ಕೆಲ ಆಸ್ತಿ ಎರಡು ವರ್ಷಗಳಿಂದ ಬಾಡಿಗೆ ವಸೂಲಿ ಆಗಿಲ್ಲ.ಅಂತಹ ಆಸ್ತಿಗಳನ್ನು ಕೂಡಲೇ ಪಾಲಿಕೆಗೆ ಮರಳಿ ಪಡೆದು ಪ್ರಸ್ತುತ ಬಾಡಿಗೆ ದರವನ್ನು ಮರು ನಿಗದಿ ಪಡಿಸಿ ಅರ್ಹ ಬಾಡಿಗೆದಾರಿಗೆ ನೀಡಬೇಕು. ಈ ಕುರಿತು ನಿಯಮಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಉಪಮೇಯರ ಹಣಮಂತ ಕೊಂಗಾಲಿಯವರು ಮಾತನಾಡಿ, ಅವಧಿ ಮುಗಿದಿದ್ದರೂ ಬಾಡಿಗೆದಾರರು ಆಸ್ತಿಗಳನ್ನು ಉಪಯೋಗಿಸುತ್ತಿರುವುದರಿಂದ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಈ ಕುರಿತು ಪಾಲಿಕೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ, ರೇಖಾ ಹೂಗಾರ, ಪಾಲಿಕೆ ಸದಸ್ಯರಾದ ರವಿ ಧೋತ್ರೆ, ಆನಂದ ಚೌಹಾಣ್, ರಾಜಶೇಖರ ಡೋಣಿ, ನಿತಿನ್ ಜಾಧವ. ಶ್ರೀಶೈಲ್ ಕಾಂಬಳೆ ,ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ಇತರರಿದ್ದರು.