ಬೆಳಗಾವಿ: ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ತನ್ನದೆ ಕೊಡುಗೆ ನೀಡಿರುವ ಕೆಎಲ್ಇ ಸಂಸ್ಥೆಯು ಈ ಭಾಗದ ಕಾಮಧೇನುವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಶ್ಲಾಘಿಸಿದರು.
ಇಲ್ಲಿನ ಜೆಎನ್‌ಎಂಸಿ ಆವರಣದ ಡಾ.ಬಿ.ಎಸ್‌ಜೀರಗೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳತ್ತ ಗಮನ ಹರಿಸಬೇಕು. ಜ್ಞಾನ ಸದ್ವಿನಿಯೋಗವಾಗಬೇಕಿದೆ. ಅದಕ್ಕಾಗಿ ಶಿಸ್ತು, ಕೌಶಲ, ಗುಣಾತ್ಮಕ ಶಿಕ್ಷಣ ನೀಡಬೇಕಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ಹಲವು ಸಂಶೋಧನಾ ಕೇಂದ್ರಗಳನ್ನು ಮಹಾವಿದ್ಯಾಲಯದಲ್ಲಿ ಸ್ಥಾಪಿಸಬೇಕು. ಸರಿಯಾದ ಪಠ್ಯ ವಿಷಯ ಅಳವಡಿಸಿಕೊಳ್ಳಬೇಕು. ಮೂಲ ವಿಜ್ಞಾನದಲ್ಲಿ ಹೊಸ ವಿಜ್ಞಾನ ಹಾಗೂ ತಂತ್ರಜ್ಞಾನ ಕಲಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಸಂಪರ್ಕ ಸಂವಹನಕ್ಕೆ ಮಾತ್ರ ಬಳಸಿ, ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅವಕಾಶ ಸ್ವೀಕರಿಸಿ, ಸವಾಲು ಎದುರಿಸಬೇಕು ಎಂದು ಕಿವಿಮಾತು ಹೇಳಿದರು.
ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿ, ಇಂದಿನ ಕಾಲದಲ್ಲಿ ಶಿಕ್ಷಕರು ಸರಿಯಾಗಿದ್ದರೆ ವಿದ್ಯಾರ್ಥಿಗಳು ಚೆನ್ನಾಗಿ ಬದುಕುತ್ತಾರೆ. ಪದವಿ ಮುಗಿದ ನಂತರ ಆಂತರಿಕವಾಗಿ ಬೆಳೆಯಬೇಕು. ವಿದ್ಯಾರ್ಥಿಗಳು ಸಂಶೋಧನೆ ಕೇಂದ್ರಗಳಲ್ಲಿ ಕಲಿಕೆ ಮಾಡಬೇಕು. ಯುವಕರು ಕಷ್ಟ-ನೋವು ಎದುರಿಸಿ ಜೀವನ ರೂಪಿಸಿಕೊಳ್ಳಬೇಕು ಎಂದರು.
"
ಸತತ ಪರಿಶ್ರಮದಿಂದ ಯಶಸ್ಸುಕೆಎಲ್‌ಇ ಸಂಸ್ಥೆ ಶಿಕ್ಷಣ ಜತೆಗೆ ಸಾಂಸ್ಕೃತಿಕ ಕ್ಷೇತ್ರಕ್ಕೂ ಕೊಡುಗೆ ನೀಡಿದೆ. ಸಂಸ್ಥೆಗೆ ರಾಜಾ ಲಖಮಗೌಡರು ಸಾಕಷ್ಟು ದಾನ ಕೊಟ್ಟಿದ್ದಾರೆ. ಇಂದಿನ ಶಿಕ್ಷಣ ಬಹು ಶಿಸ್ತಿನ ಕೌಶಲಗಳಿಂದ ಕೂಡಿರಬೇಕು. ಹೊಸ ಶಿಕ್ಷಣ ನೀತಿ ಅಳವಡಿಕೊಂಡಿದ್ದೇವೆ. ಪ್ರಾಯೋಗಿಕ ಕಲಿಕೆ ಜಾರಿಗಾಗಿ ಇನ್‌ಕ್ಯುಬೆಷನ್ ಕೇಂದ್ರ ಸ್ಥಾಪಿಸಲು ಒತ್ತು ನೀಡಿದ್ದೇವೆ. ಜ್ಞಾನದ ವಿವಿಧ ಆಯಾಮ ವಿದ್ಯಾರ್ಥಿಗಳು ಪಡೆಯಬೇಕು. ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಪದವಿ ಪಡೆದ ನಂತರ ವಿದ್ಯಾರ್ಥಿಗಳು ದೇಶಕ್ಕೆ ಸೇವೆ ನೀಡುವ ಗುರಿ ಹೊಂದಬೇಕು. ಜ್ಞಾನದ ವಿವಿಧ ಕ್ಷಿತಿಜಗಳನ್ನು ವಿದ್ಯಾರ್ಥಿಗಳು ಪಡೆಯಬೇಕು. ನಿರಂತರ ಸಾಧನೆ ಮಾಡಿದರೆ ಅದೊಂದು ಮೈಲಿಗಲ್ಲಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಕಾಲೇಜು ಶಿಕ್ಷಣ ಸಂಸ್ಥೆಗಳ ಕಾರ್ಯಕಾರಿಣಿ ಸಮಿತಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಸಮಾರಂಭದಲ್ಲಿ 2024-25ನೇ ಸಾಲಿನ ಬಿಎಸ್ಸಿ, ಬಿಸಿಎ ಹಾಗೂ ಎಂಎಸ್ಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾಲೇಜಿನ ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ ಹಾಗೂ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರು, ಸದಸ್ಯರು, ಆಜೀವ ಸದಸ್ಯರು, ಪ್ರಾಧ್ಯಾಪಕರು ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಪೂಜಾ ಮೆಳವಂಕಿ ಮತ್ತು ಪ್ರೊ.ಮಹಾದೇವಿ ಹುಣಸಿಬೀಜ ನಿರೂಪಿಸಿದರು.