ನ್ಯೂ ಗೂಡ್ಸ್‌ಶೆಡ್ ರಸ್ತೆಗೆ ಬೇಕಿದೆ ಕಾಯಕಲ್ಪ!

ಬೆಳಗಾವಿಯ ನ್ಯೂಗೂಡ್ಸ್ ಶೆಡ್ ರಸ್ತೆ ತುಂಬ ಗುಂಡಿಗಳು ಬಿದ್ದಿರುವುದು.
ಬೆಳಗಾವಿಯ ನ್ಯೂಗೂಡ್ಸ್ ಶೆಡ್ ರಸ್ತೆ ತುಂಬ ಗುಂಡಿಗಳು ಬಿದ್ದಿರುವುದು.
Published on
ಬೆಳಗಾವಿ: ರೈಲ್ವೆ ನಿಲ್ದಾಣದ ಹಿಂಭಾಗದ ನ್ಯೂ ಗೂಡ್ಸ್‌ಶೆಡ್ ರಸ್ತೆ ತೆಗ್ಗು ಗುಂಡಿಗಳು ಬಿದ್ದು ಹದೆಗಟ್ಟು ಹೋಗಿದ್ದರೂ ದುರಸ್ತಿ ಭಾಗ್ಯ ಕಂಡಿಲ್ಲ. ಬೇಸಿಗೆಯಲ್ಲಿ ಧೂಳಿನಿಂದ ಬೇಸತ್ತಿದ್ದ ಜನ ಈಗ ಮಳೆ ನೀರಿನಿಂದ ತುಂಬಿರುವ ಗುಂಡಿಗಳಿಂದ ತೊಂದರೆ ಅನುಭವಿಸುವಂತಾಗಿದೆ.
ಸ್ಥಳೀಯರು ಮುಂಚಿತವಾಗಿಯೇ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ ಇಡೀ ರಸ್ತೆ ಅಪಾಯಕಾರಿಯಾಗಿದ್ದು, ಬೈಕ್ ಸವಾರರು ಬಿದ್ದು ಎದ್ದು ಓಡಾಡುತ್ತಿದ್ದಾರೆ. ಇಲ್ಲಿನ ಮನೆ- ಅಂಗಡಿಗಳಿಗೆ ವಾಹನಗಳ ಓಡಾಟದಿಂದ ಗುಂಡಿಯೊಳಗಿನ ಕೆಸರು ಸಿಡಿಯುತ್ತಿದ್ದು, ಬಾಗಿಲು ಹಾಕಿಕೊಂಡೇ ಕುಳಿತುಕೊಳ್ಳುವ ದುಸ್ಥಿತಿ ಬಂದಿದೆ. ಈ ರಸ್ತೆಯಲ್ಲಿ ಎಲ್ ಆ್ಯಂಡ್ ಟಿ ಕಂಪನಿಯು ಕಾಮಗಾರಿ ನಡೆಸಿದ ನಂತರ ರಸ್ತೆ ಹದಗೆಟ್ಟು ಹೋಗಿದೆ. ಹಿರಿಯ ನಾಗರಿಕರು ಮತ್ತು ಮಹಿಳೆಯರು ಸಣ್ಣಪುಟ್ಟ ಅಪಘಾತಗಳಿಗೀಡಾಗಿ ಗಾಯಗೊಂಡಿದ್ದಾರೆ.
ಗುಂಡಿಗಳಲ್ಲಿನ ಕೆಸರು ನೀರು ವಿದ್ಯಾರ್ಥಿಗಳ ಶಾಲಾ ಸಮವಸ್ತ್ರಗಳ ಮೇಲೆ ಚಿಮ್ಮುತ್ತಿದ್ದು, ಶಾಲೆಗೆ ಹೋಗಿ ಬರುವುದೇ ಕಷ್ಟವಾಗಿದೆ. ಈ ರಸ್ತೆ ತಪ್ಪಿಸುವುದಕ್ಕಾಗಿ ಕಪಿಲೇಶ್ವರ ಸೇತುವೆ ಹಾಗೂ ಶಾಸ್ತ್ರಿನಗರ ಮಹಾತ್ಮಫುಲೆ ರಸ್ತೆ ಮೂಲಕ ಸುತ್ತುವರೆದು ಓಡಾಡುವಂತಾಗಿದೆ. ಮೇಲ್ಸೇತುವೆ ಮೇಲಿನ ನೀರೆಲ್ಲ ಇದೇ ರಸ್ತೆಗೆ ನುಗ್ಗುತ್ತಿದ್ದು, ರಸ್ತೆ ಸ್ಥಿತಿ ಮತ್ತಷ್ಟು ಕೆಟ್ಟಿದ್ದು, ಮಳೆನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಒಂದೆಡೆ ಮಾತ್ರ ಸುಧಾರಣೆ: ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಹಿನ್ನೆಲೆಯಲ್ಲಿ ಸದ್ಯ ನ್ಯೂ ಗೂಡ್ಸ್ ಶೆಡ್ ರಸ್ತೆ ಗಣ್ಯರು ಓಡಾಡುವ ಪ್ರಮುಖ ಮಾರ್ಗವಾಗಿದೆ. ಇಂತಹ ಸಮಯದಲ್ಲೂ ರಸ್ತೆ ಗುಂಡಿ ಮುಚ್ಚುವ ಕೆಲಸವಾಗಿಲ್ಲ. ಸಂಘದ ಕಚೇರಿಗೆ ಬರುವ ಗಣ್ಯರನ್ನು ಎಸ್‌ಪಿಎಂ ರಸ್ತೆ ಮೂಲಕ ಕರೆದುಕೊಂಡು ಬರುವ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ರೇಣುಕಾ ಹೋಟೆಲ್‌ನಿಂದ ಸಂಘದ ಕಚೇರಿವರೆಗಿನ ಕ್ರಾಸ್‌ವರೆಗೆ ಎರಡೂ ಬದಿಯ ಫುಟ್‌ಪಾತ್‌ಗೆ ಪೇವರ್ಸ್‌ ಹಾಕಿ ಅಂದಗೊಳಿಸಲಾಗಿದೆ. ಆದರೆ ಗೂಡ್ಸ್ ಶೆಟ್ ರಸ್ತೆಯನ್ನು ಗಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net