ಪಾಲಿಕೆ ಮಳಿಗೆ ಟೆಂಡರ್ ನನೆಗುದಿಗೆ!

ಪಾಲಿಕೆ
ಪಾಲಿಕೆ
Published on
ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಮಹಾನಗರ ಪಾಲಿಕೆಯ ಶಾಶ್ವತ ಆದಾಯ ಮೂಲಗಳಲ್ಲಿ ಒಂದಾಗಿರುವ ‘ವಾಣಿಜ್ಯ ಮಳಿಗೆ’ಗಳ ಮಾಸಿಕ ಬಾಡಿಗೆ ಗುತ್ತಿಗೆ ಟೆಂಡರ್ ಅರ್ಧಕ್ಕೆ ನನೆಗುದಿಗೆ ಬಿದ್ದಿದೆ. ಮತ್ತೊಂದೆಡೆ ಮಳಿಗೆ ಗುತ್ತಿಗೆ ರಾಜಕೀಯ ಜಿದ್ದಾಜಿದ್ದಿಗೆ ಎಡೆಮಾಡಿಕೊಟ್ಟಿದೆ.
ಪಾಲಿಕೆ ವ್ಯಾಪ್ತಿಯ ಗಣಪತಿ ಗಲ್ಲಿ, ಕಸಾಯಿ ಗಲ್ಲಿ, ಕುರಿ ಶೆಡ್, ಮೀನು ಮಾರುಕಟ್ಟೆ, ಮಟನ್ ಮಾರ್ಕೆಟ್, ಅಶೋಕ ನಗರ ಕ್ರೀಡಾ ಸಂಕೀರ್ಣ, ರವಿವಾರ ಪೇಟ, ಕೋಲಕಾರ ಮಾರ್ಕೆಟ್, ಸಿಬಿಟಿ ವಾಣಿಜ್ಯ ಸಂಕೀರ್ಣ, ಮಾಳಮಾರುತಿ ಬಡಾವಣೆ, ಡಬಲ್ ರಸ್ತೆ, ಸಿಬಿಟಿ ಮಿನಿ ವಾಣಿಜ್ಯ ಸಂಕೀರ್ಣ ಸೇರಿ ವಿವಿಧೆಡೆ 89 ವಾಣಿಜ್ಯ ಮಳಿಗೆಗಳಿವೆ. ಈ ಮಳಿಗೆಗಳಿಂದ ವಾರ್ಷಿಕ ಕೋಟ್ಯಂತರ ರೂ. ಆದಾಯ ನಿರೀಕ್ಷೆಯಲ್ಲಿರುವ ಪಾಲಿಕೆಗೆ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಪಾಲಿಕೆಯ ಆರ್ಥಿಕ ಸ್ಥಾಯಿ ಸಮಿತಿ ಕೈಗೊಂಡ ನಿರ್ಣಯದ ಮೇರೆಗೆ ನಗರದಲ್ಲಿರುವ 89 ವಾಣಿಜ್ಯ ಮಳಿಗೆಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ 12 ವರ್ಷದ ಅವಧಿಗೆ ಗುತ್ತಿಗೆ ನೀಡಲು 2026 ಜನವರಿಯಲ್ಲಿ ಇ-ಹರಾಜು ಆಹ್ವಾನಿಸಲಾಗಿದೆ.
ಶೇ.18ರಷ್ಟು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಡಲಾಗಿದೆ. ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದ ಅಂಗವೈಕಲ್ಯ ಹೊಂದಿದವರಿಗೆ ಕ್ರಮ ಸಂಖ್ಯೆ 53 ಹಾಗೂ 54 ಮಳಿಗೆಗಳನ್ನು ಮೀಸಲಿಡಲಾಗಿದೆ. ಈ ಮಳಿಗೆಗಳ ಟೆಂಡರ್‌ನಿಂದ 4 ಕೋಟಿ ರೂ. ವರೆಗೆ ಠೇವಣಿ ಸಂಗ್ರಹವಾಗಲಿದೆ ಹಾಗೂ ಆಯಾ ಪ್ರದೇಶದ ಬಾಡಿಗೆ ದರದ ಅನುಗುಣವಾಗಿ ಪಾಲಿಕೆಗೆ ಮಾಸಿಕ 15ರಿಂದ 20 ಲಕ್ಷ ರೂ. ಬಾಡಿಗೆ ಲಭಿಸಬಹುದು ಎಂದು ಅಂದಾಜಿಸಲಾಗಿದೆ. 
ಆದರೆ, ತಾಂತ್ರಿಕ ಸಮಸ್ಯೆ, ಟೆಂಡರ್‌ನಲ್ಲಿ ಕೇವಲ ಐದು ಜನರು ಭಾಗವಹಿಸಿದ್ದಾರೆ ಎಂಬ ನೆಪವೊಡ್ಡಿ, ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಬಳಿಕ ಹೊಸ ಟೆಂಡರ್ ಕರೆಯದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
"

ನಗರದ ವಿವಿಧ ಪ್ರದೇಶಗಳಲ್ಲಿರುವ ವಾಣಿಜ್ಯ ಮಳಿಗೆಗಳ ಮಾಸಿಕ ಬಾಡಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಐದು ಜನರು ಭಾಗವಹಿಸಿದ್ದರಿಂದ ಟೆಂಡರ್ ತಡೆಹಿಡಿಯಲಾಗಿದೆ. ಇದೀಗ ಮಳಿಗೆಗಳನ್ನು ಪ್ರತ್ಯೇಕಿಸಿ, ಟೆಂಡರ್ ಕರೆಯುವ ಕುರಿತು ಮಾ.2ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net