ಬೆಳಗಾವಿ: ವಿವಿಧತೆಯಲ್ಲಿ ಏಕತೆ ಸಾರುವ ಸಂದೇಶವೇ ಭಾರತದ ಆತ್ಮ. ನಾವೆಲ್ಲರೂ ಒಂದೇ, ನಮಗೆಲ್ಲರಿಗೂ ಜಗದೊಡೆಯನಾದ ಜಗದೀಶ್ವರೊಬ್ಬನೆ ತಂದೆ ಎಂಬ ಭಾವನೆಯೊಂದಿಗೆ ದೇಶದೆಲ್ಲೆಡೆ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ ಎಂದು ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ನಗರದ ಕಾರಂಜಿಮಠದಲ್ಲಿ ಭಾನುವಾರ ಜರುಗಿದ 296ನೇ ಮಾಸಿಕ ಶಿವಾನುಭವ ಹಾಗೂ ಮಹಾಶಿವರಾತ್ರಿ ವಿಶೇಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿವತತ್ವವು ಅತ್ಯಂತ ಪ್ರಾಚೀನವಾದುದು. ಆದಿಶಿವನ ಪರಿಕಲ್ಪನೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಶೈವಧಾರೆಯ ಮೂಲಕ ಶಿವಾರಾಧನೆ ಇಂದಿಗೂ ನಿರಂತರವಾಗಿ ಬೆಳೆಯುತ್ತಿದೆ ಎಂದರು.
ಉಪನ್ಯಾಸಕಿ ಡಾ.ಅಶ್ವಿನಿ ಕುದರಿಮಠ (ಭಾಗೋಜಿ) ಮಾತನಾಡಿ, ವ್ಯಾಸಮುನಿ ರಚಿಸಿದ ಹದಿನೆಂಟು ಪುರಾಣಗಳಲ್ಲಿ ಹತ್ತು ಪುರಾಣ ಶಿವತತ್ವ ಪ್ರಸಾರಕ್ಕೆ ಮೀಸಲಾಗಿವೆ. ವೇದಗಳಲ್ಲಿ ಶಿವತತ್ವ ವಿಶಾಲವಾಗಿ ಪ್ರತಿಪಾದಿತವಾಗಿದೆ. ಶಿವಮಂತ್ರ ಜಪದಿಂದ ಮಾನವನ ದೇಹದಲ್ಲಿನ ಕುಂಡಲಿನಿ ಶಕ್ತಿ ಜಾಗೃತವಾಗಿ ಅಣಿಮಾದಿ ಅಷ್ಟಸಿದ್ಧಿಗಳು ಲಭಿಸುತ್ತವೆ ಎಂದು ವಿವರಿಸಿದರು.
ಭರತೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ವಿನೋದ ದೊಡ್ಡಣ್ಣವರ, ಅನುದಾನಿತ ಶಾಲಾಕಾಲೇಜುಗಳ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಳಂಗಳಿಯವರನ್ನು ಸನ್ಮಾನಿಸಲಾಯಿತು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಉತ್ತರಾಧಿಕಾರಿ ಡಾ.ಶಿವಯೋಗಿ ದೇವರು, ಬಸವರಾಜ ಜಗಜಂಪಿ, ಎ.ಕೆ.ಪಾಟೀಲ ಇತರರಿದ್ದರು.