ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ನಡೆಸಿದ ಜನತಾ ದರ್ಶನದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾರ್ವಜನಿಕರು ವೈಯಕ್ತಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು.
ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಪಿಂಚಣಿ ಸೌಲಭ್ಯ, ಗೃಹ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಅಂಗನವಾಡಿ ಸಮಸ್ಯೆ, ಭೂ ದಾಖಲೆ ಸಂಬಂಧಿತ ಅಡಚಣೆಗಳು ಸೇರಿ ಅನೇಕ ವಿಚಾರಗಳನ್ನು ಸಾರ್ವಜನಿಕರು ಪ್ರಸ್ತಾಪಿಸಿದರು.
ಅಹವಾಲು ಆಲಿಸಿದ ಸಚಿವೆ, ತಕ್ಷಣ ಪರಿಹಾರ ಸಾಧ್ಯವಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾರ್ಗದರ್ಶನ ನೀಡಿದರು. ಕೆಲ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟ ಸೂಚಿಸಿದರು. ತುರ್ತು ಸ್ವರೂಪದ ಕೆಲವು ಸಮಸ್ಯೆಗಳಿಗೆ ಆದ್ಯತೆ ನೀಡಿ ತಕ್ಷಣ ಕಾರ್ಯಾಚರಣೆ ಆರಂಭಿಸುವಂತೆ ತಿಳಿಸಿದರು.