ರಕ್ತಹೀನತೆಗೆ ಅಪೌಷ್ಟಿಕತೆಯೂ ಪ್ರಮುಖ ಕಾರಣ!

ಕೆಎಲ್‌ಇ ಸಂಸ್ಥೆಯ ಡಾ.ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಸದ್ಗುರು ಮಧುಸೂದನ ಸಾಯಿ ಅವರು ಡಾ.ಪ್ರಭಾಕರ ಕೋರೆಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕೆಎಲ್‌ಇ ಸಂಸ್ಥೆಯ ಡಾ.ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಸದ್ಗುರು ಮಧುಸೂದನ ಸಾಯಿ ಅವರು ಡಾ.ಪ್ರಭಾಕರ ಕೋರೆಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
Published on
ಬೆಳಗಾವಿ:ಉತ್ತರ ಕರ್ನಾಟಕ ಭಾಗದಲ್ಲಿ ಮಹಿಳೆಯರನ್ನು ಕಾಡುತ್ತಿರುವ ರಕ್ತಹೀನತೆಗೆ ಅಪೌಷ್ಟಿಕತೆಯೂ ಪ್ರಮುಖ ಕಾರಣವಾಗಿದೆ. ಹೀಗಾಗಿ ಕೆಎಲ್‌ಇ ಸಂಸ್ಥೆಯ ಜತೆಗೆ ಹಳ್ಳಿಗಳಲ್ಲಿ ಪೌಷ್ಟಿಕಾಂಶದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಒಂದು ಜಗತ್ತು ಒಂದು ಕುಟುಂಬ ಮಿಷನ್ ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ತಿಳಿಸಿದರು.
ನಗರದ ಕೆಎಲ್‌ಇ ಸಂಸ್ಥೆಯ ಡಾ.ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಜನರ ಆರೋಗ್ಯ ಹಾಗೂ ಕಲ್ಯಾಣಕ್ಕಾಗಿ ಕೆಎಲ್‌ಇ ಜತೆಗೆ ಕೈಜೋಡಿಸಿ ಸೇವೆ ಸಲ್ಲಿಸಲು ಒಂದು ಜಗತ್ತು, ಒಂದು ಕುಟುಂಬ ಮಿಷನ ಸಿದ್ಧವಿದೆ. ಗ್ರಾಮೀಣ ಜನರಿಗೆ ನೇರವಾಗಿ ತಲುಪುವ ರೀತಿಯಲ್ಲಿ ಪೌಷ್ಟಿಕಾಂಶ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.
ತಂತ್ರಜ್ಞಾನ ಮನುಷ್ಯನ ಬದುಕನ್ನು ಸುಲಭಗೊಳಿಸಬೇಕೇ ಹೊರತು, ಅದಕ್ಕೆ ಅವಲಂಬಿತನಾಗುವಂತಾಗಬಾರದು. ಎಐ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಆತ್ಮವಿಶ್ವಾಸ ಮತ್ತು ಸ್ವಸಾಮರ್ಥ್ಯ ಕುಂದಿಸಬಹುದು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಗೆ ಮಿತಿ ಹಾಕಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಪ್ರತಿಯೊಬ್ಬರೂ ನಿಜವಾದ ಸ್ನೇಹಿತರಾಗುವುದಿಲ್ಲ ಎಂದರು.
ಎಐನಿಂದ ಅನುಕೂಲಗಳಿದ್ದರೂ ಪ್ರತಿಯೊಂದಕ್ಕೂ ಅದನ್ನೇ ಅವಲಂಬಿಸುವುದು ಅಪಾಯಕಾರಿ. ಸ್ವತಂತ್ರವಾಗಿ ಯೋಚಿಸುವ, ನಿರ್ಧಾರ ಕೈಗೊಳ್ಳುವ ಹಾಗೂ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಳಗಾವಿ ಜಿಲ್ಲೆ ಆಧ್ಯಾತ್ಮಿಕತೆ, ಶಿಕ್ಷಣ, ಆರೋಗ್ಯ ಹಾಗೂ ರಾಷ್ಟ್ರೀಯ ಪ್ರಜ್ಞೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನದೇ ವೈಶಿಷ್ಟ್ಯ ಹೊಂದಿದೆ. ಇಷ್ಟೆಲ್ಲ ಸಾಮರ್ಥ್ಯವಿದ್ದರೂ ಜಿಲ್ಲೆಯಲ್ಲಿ ಬಡತನ ಮುಂದುವರಿದಿರುವುದು ವಿಪರ್ಯಾಸ. ಸಾವಯವ ಕೃಷಿ ಕೈಗೊಳ್ಳುವ ರೈತರನ್ನು ಪ್ರೋತ್ಸಾಹಿಸುವ ಜತೆಗೆ ಪೌಷ್ಟಿಕಾಂಶ ಕುರಿತು ಜಾಗೃತಿ ಮೂಡಿಸಬೇಕು. ಆರೋಗ್ಯಕ್ಕಾಗಿ ಜನರು ಮಾಡುತ್ತಿರುವ ವೆಚ್ಚವನ್ನು ಕಡಿಮೆ ಮಾಡಲು ಆರೋಗ್ಯಕರ ಜೀವನಶೈಲಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.
ಪ್ರಶಾಂತಿ ಬಾಲಮಂದಿರದ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎನ್.ನರಸಿಂಹಮೂರ್ತಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಪ್ರಾಂಶುಪಾಲ ಸಿ.ಎನ್.ನಾಯ್ಕರ, ಶಾಸಕ ಅಭಯ ಪಾಟೀಲ, ರಾಜ್ಯಸಭೆ ಮಾಜಿ ಸದಸ್ಯ ಈರಣ್ಣ ಕಡಾಡಿ, ಡಿಸಿಪಿ ನಾರಾಯಣ ಬರಮನಿ ಇತರರಿದ್ದರು.
.....................
ಬಾಕ್ಸ್
ಜನರ ಆರೋಗ್ಯ ರಕ್ಷಣೆಗೆ ಕೆಎಲ್‌ಇ ಬದ್ಧ
ಉತ್ತರ ಕರ್ನಾಟಕದಲ್ಲಿ ಮಹಿಳೆಯರಲ್ಲಿ ಅನೀಮಿಯಾ ದೊಡ್ಡ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶದ ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಈ ಭಾಗದಲ್ಲಿ ಪೌಷ್ಟಿಕಾಂಶದಿಂದ ಕೂಡಿರುವ ರಾಗಿಯಂತಹ ಸಾಂಪ್ರದಾಯಿಕ ಆಹಾರಗಳ ಬಳಕೆ ಕಡಿಮೆ. ಈ ಹಿನ್ನೆಲೆಯಲ್ಲಿ ಪೌಷ್ಟಿಕಾಂಶದ ಜಾಗೃತಿ ಮೂಡಿಸುತ್ತಿರುವ ಒಂದು ಜಗತ್ತು, ಒಂದು ಕುಟುಂಬ ಮಿಷನ್ ಜತೆಗೆ ಕೆಎಲ್‌ಇ ಕೈಜೋಡಿಸಲಿದೆ. ಈ ಮೂಲಕ ಜನರ ಆರೋಗ್ಯ ಸುಧಾರಣೆಗೆ ಮತ್ತಷ್ಟು ಪರಿಣಾಮಕಾರಿ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಲಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಹೇಳಿದರು.
...................
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net