ಬೋರಗಾಂವದಲ್ಲಿ ಶೆಂಡೂರು ಗ್ರಾಮದ ವಿದ್ಯಾಸಾಗರ ಪ್ರೌಢಶಾಲೆ ನಿರ್ದೇಶಕರಿಗೆ 15 ಲಕ್ಷ ರೂ. ಮಂಜೂರಾತಿ ಪತ್ರವನ್ನು ಯುವ ಮುಖಂಡ ಉತ್ತಮ ಪಾಟೀಲ ಹಸ್ತಾಂತರಿಸಿದರು. ಅಭಿನಂದನ ಪಾಟೀಲ, ಪುಂಡಲೀಕ ಕುಂಬಾರ, ಬಂಡೋಪಂತ್ ಲಾಡ್, ವಿಠ್ಠಲ ಚೌಗುಲೆ, ಇತರರಿದ್ದರು.
ಬೋರಗಾಂವ: ಶೆಂಡೂರು ಗ್ರಾಮದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಭೈರವನಾಥ ಶಿಕ್ಷಣ ಪ್ರಸಾರಕ ಮಂಡಳದ ವಿದ್ಯಾಸಾಗರ ಪ್ರೌಢಶಾಲೆಗೆ ಮಹಾರಾಷ್ಟ್ರ ಸರ್ಕಾರ ಮುಖ್ಯಮಂತ್ರಿ ದತ್ತಿ ನಿಧಿಯಿಂದ 15 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಪಟ್ಟಣದಲ್ಲಿರುವ ವಿದ್ಯಾಸಾಗರ ಮರಾಠಿ ಮಧ್ಯಮ ಪ್ರೌಢಶಾಲೆ ನಿರ್ದೇಶಕರಿಗೆ ಶನಿವಾರ 15 ಲಕ್ಷ ರೂ. ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಶಾಲೆಗೆ ತಡೆಗೋಡೆ, ಆಟದ ಮೈದಾನ ಮತ್ತು ಆಧುನಿಕ ಗ್ರಂಥಾಲಯ ನಿರ್ಮಿಸಲಾಗುವುದು. ಗಡಿಭಾಗದಲ್ಲಿರುವ ಸುಮಾರು 843 ಹಳ್ಳಿಗಳು ಗಡಿ ಪ್ರದೇಶ (ಸೀಮಾ)ಎಂದು ಮಹಾರಾಷ್ಟ್ರ ರಾಜ್ಯದಲ್ಲಿ ನೋಂದಣಿ ಇವೆ. ಹೀಗಾಗಿ, ಕರ್ನಾಟಕ ಗಡಿ ಭಾಗದ ಈ ಹಳ್ಳಿಗಳಿಗೆ ಮಹಾರಾಷ್ಟ್ರ ಪ್ರತಿ ವರ್ಷ ಶೈಕ್ಷಣಿಕ ನಿಧಿಯಡಿ ಅನುದಾನ ನೀಡುತ್ತಿದೆ. ಶೆಂಡೂರು ಪ್ರೌಢಶಾಲೆಗೆ ಅನುದಾನ ಕೋರಿ ನಾನು ಮತ್ತು ಉದ್ಯಮಿ ಅಭಿನಂದನ ಪಾಟೀಲ ಮಹಾರಾಷ್ಟ್ರ ಸರ್ಕಾರಕ್ಕೆ ವಿನಂತಿಸಿದ್ದೆವು. ಈ ಹಿನ್ನೆಲೆಯಲ್ಲಿ ಅನುದಾನ ಮಂಜೂರಾಗಿದೆ ಎಂದರು.