ಬೆಳಗಾವಿ: ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಕೆಲಸ ಮಾಡುವ ಪತ್ರಕರ್ತರು ನೈಜತೆ, ವಾಸ್ತವ ಮತ್ತು ಧೈರ್ಯದೊಂದಿಗೆ ಸುದ್ದಿ ಬಿತ್ತರಿಸಿದಾಗ ಸಮಾಜದ ಏಳಿಗೆ ಸಾಧ್ಯ ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.
ನಗರದ ವಾರ್ತಾ ಭವನದಲ್ಲಿ ಸೋಮವಾರ ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘದ ವತಿಯಿಂದ ಏರ್ಪಡಿಸಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಉತ್ತರ ಕರ್ನಾಟಕ ಪತ್ರಕರ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಅನೇಕ ಸವಾಲುಗಳ ನಡುವೆಯೂ ತಮ್ಮ ವೃತ್ತಿಯನ್ನು ನಿಭಾಯಿಸುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಸುದ್ದಿಗಳು ಕೇವಲ ಬರಹಗಳಾಗದೇ, ಸಮಾಜದ ಬೆಳವಣಿಗೆಗೆ ದಿಕ್ಕು ತೋರಿಸುವ ಶಕ್ತಿಯಾಗಬೇಕು ಎಂದರು.
ಡಿಸಿಪಿ ನಾರಾಯಣ ಬರಮನಿ ಮಾತನಾಡಿ, ಪತ್ರಕರ್ತರು ಮತ್ತು ಪೊಲೀಸರು ಸಮಾಜದ ಸತ್ಯವನ್ನು ಜನರ ಮುಂದೆ ತರುವ ಕೆಲಸ ಮಾಡುತ್ತಾರೆ. ಬೆಳಗಾವಿಯ ಪತ್ರಕರ್ತರು ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಲಾಸ ಜೋಶಿ ಮಾತನಾಡಿ, ಉತ್ತರ ಕರ್ನಾಟಕದ ಸಮಾಜಮುಖಿ ಪತ್ರಿಕೋದ್ಯಮ ಸರ್ಕಾರದ ಕಿವಿಗೆ ತಲುಪಬೇಕಿದ್ದು, ಈ ಭಾಗದ ಪತ್ರಕರ್ತರ ಬವಣೆಗಳ ಬಗ್ಗೆ ಸರ್ಕಾರ ಗಮನ ಸೆಳೆಯು ಕೆಲಸವನ್ನು ಈ ಕಡೆ ಜನಪ್ರತಿನಿಧಿಗಳು ಮಾಡಬೇಕಿದೆ ಎಂದರು.
ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಧಾರವಾಡದ ಗುರುರಾಜ ಜಮಖಂಡಿ, ಹುಬ್ಬಳ್ಳಿಯ ಅಮಿತ ಉಪಾಧ್ಯೆ, ಬೆಳಗಾವಿಯ ಸಂತೋಷ ಚಿನಗುಡಿ ಹಾಗೂ ಚಿಕ್ಕೋಡಿಯ ಸಂಜೀವ ಕಾಂಬಳೆಯವರನ್ನು ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಹೃಷಿಕೇಶ ದೇಸಾಯಿ, ಕಾನೂನು ಸಲಹೆಗಾರ ರವೀಂದ್ರ ತೋಟಿಗೇರ, ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕಾಂತ ಸುಗಂಧಿ ಮಾತನಾಡಿದರು.
ರವಿ ಉಪ್ಪಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದನಗೌಡ ಪಾಟೀಲ ಸನ್ಮಾನಿತರನ್ನು ಪರಿಚಯಿಸಿದರು. ಕೀರ್ತನಕುಮಾರಿ ನಿರೂಪಿಸಿದರು.