ಮಧುಮೇಹವಿದ್ದರೂ ಸಾಮಾನ್ಯ ಬದುಕು ಸಾಧ್ಯ

ಬೆಳಗಾವಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಮಧುಮೇಹಿ ಮಕ್ಕಳ ಉಚಿತ ಬೇಸಿಗೆ ಶಿಬಿರ ಉದ್ಘಾಟನೆಯಲ್ಲಿ ಡಾ.ಸಂದೀಪ ಶ್ರೀವಾತ್ಸವ, ಡಾ.ಎಂ.ವಿ.ಜಾಲಿ, ಡಾ.ಸುಜಾತಾ ಜಾಲಿ, ಕರ್ನಲ್ ಡಾ.ಎಂ.ದಯಾನಂದ, ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ರಾಜೇಶ ಪವಾರ ಇತರರಿದ್ದರು.
ಬೆಳಗಾವಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಮಧುಮೇಹಿ ಮಕ್ಕಳ ಉಚಿತ ಬೇಸಿಗೆ ಶಿಬಿರ ಉದ್ಘಾಟನೆಯಲ್ಲಿ ಡಾ.ಸಂದೀಪ ಶ್ರೀವಾತ್ಸವ, ಡಾ.ಎಂ.ವಿ.ಜಾಲಿ, ಡಾ.ಸುಜಾತಾ ಜಾಲಿ, ಕರ್ನಲ್ ಡಾ.ಎಂ.ದಯಾನಂದ, ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ರಾಜೇಶ ಪವಾರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮಧುಮೇಹ ಪೀಡಿತ 18 ವರ್ಷದೊಳಗಿನ ಅನೇಕ ಮಕ್ಕಳು ಇನ್ಸುಲಿನ್ ಅವಲಂಬಿತರಾಗಿದ್ದರೂ ಸಾಮಾನ್ಯ ಮಕ್ಕಳಂತೆ ಶಿಕ್ಷಣ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಉಪಕುಲಪತಿ ಡಾ.ಸಂದೀಪ ಶ್ರೀವಾತ್ಸವ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಗುರುವಾರ ಏರ್ಪಡಿಸಿದ್ದ 25ನೇ ವಾರ್ಷಿಕ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಭಾರತ ಇಂದು ಮಧುಮೇಹ ರಾಜಧಾನಿಯಾಗುತ್ತಿದೆ. ಸರ್ಕಾರದ ಜತೆಗೆ ಖಾಸಗಿ ಹಾಗೂ ಸಾಮಾಜಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಧುಮೇಹಿ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲು ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಆರೈಕೆ, ಶಿಕ್ಷಣ ಹಾಗೂ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಡಾ.ಎಂ.ವಿ.ಜಾಲಿ ಹಾಗೂ ಡಾ.ಸುಜಾತಾ ಜಾಲಿ ದಂಪತಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಚಿಕ್ಕ ಮಕ್ಕಳ ಮಧುಮೇಹ ತಜ್ಞ ವೈದ್ಯೆ ಡಾ.ಸುಜಾತಾ ಎಂ.ಜಾಲಿ ಮಾತನಾಡಿ, ನಮ್ಮ ಕೇಂದ್ರದಲ್ಲಿ 625 ಮಕ್ಕಳು ನಿರಂತರ ಚಿಕಿತ್ಸೆ ಮತ್ತು ಮಾರ್ಗದರ್ಶನ ಪಡೆಯುತ್ತಿದ್ದಾರೆ. ಮಧುಮೇಹವಿದ್ದರೂ ಸಾಮಾನ್ಯ ಜೀವನ ನಡೆಸಬಹುದು. ಮದುವೆಯಾಗಬಹುದು ಹಾಗೂ ಉನ್ನತ ಸಾಧನೆ ಮಾಡಬಹುದು ಎಂಬ ವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಮಕ್ಕಳು ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. 10 ತಿಂಗಳೊಳಗಿನ ಮಧುಮೇಹ ಪೀಡಿತ ಶಿಶುಗಳಿಗೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದರು.
ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಮಾತನಾಡಿ, ಮಧುಮೇಹ ತಪಾಸಣೆ ಮತ್ತು ಚಿಕಿತ್ಸಾ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಿ ಪ್ರತಿಯೊಬ್ಬ ಮಕ್ಕಳಿಗೂ ಚಿಕಿತ್ಸೆ ತಲುಪುವಂತೆ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.
ಕಾಹೆರ್ ಕುಲಸಚಿವ ಡಾ.ವಿ.ಎಂ.ಪಟ್ಟಣಶೆಟ್ಟಿ, ಜೆಎನ್‌ಎಂಸಿ ಪ್ರಾಚಾರ್ಯ ಡಾ.ರಾಜೇಶ ಪವಾರ, ಹಿರಿಯ ಮಧುಮೇಹ ತಜ್ಞರಾದ ಡಾ.ಎಂ.ವಿ.ಜಾಲಿ, ಪ್ರೊ.ವಿ.ಡಿ.ಪಾಟೀಲ, ಡಾ.ಆರ್.ಎಸ್.ಮುಧೋಳ ಇತರಿದ್ದರು. ಡಾ.ನಂದಿತಾ ನಿರೂಪಿಸಿದರು. ಡಾ. ಜ್ಯೋತಿ ವಾಸೇದಾರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net